ಹೈದರಾಬಾದ್: ಭಾರತ ಕ್ರಿಕೆಟ್ ದಂತಕತೆ, ಟೆಸ್ಟ್ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸುನೀಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇಂದಿಗೆ ಬರೋಬ್ಬರಿ 50 ವರ್ಷ ಕಳೆದಿವೆ.
ಕ್ರಿಕೆಟ್ ಜಗತ್ತಿನಲ್ಲಿ ಅದಾಗಲೇ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಮ್ಮ ಅಧಿಪತ್ಯ ಸಾಧಿಸಿದ್ದವು. ಭಾರತವು ಕ್ರಿಕೆಟ್ ಲೋಕದಲ್ಲಿ ಶಿಶುವಾಗಿ ಅಂಬೆಗಾಲಿಡುತ್ತಿತ್ತು. ಆ ಸಂದರ್ಭದಲ್ಲಿ ತಂಡದಲ್ಲಿ ಅವಕಾಶ ಪಡೆದಾಗ ಸುನೀಲ್ ಗವಾಸ್ಕರ್ಗೆ ಕೇವಲ 21 ವರ್ಷ. ಕೇವಲ 5.5 ಅಡಿಯ ವಾಮನ ಮೂರ್ತಿಯಂತಿದ್ದ ಗವಾಸ್ಕರ್ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಏಳಡಿ ಎತ್ತರದ ವಿಂಡೀಸ್ನ ದೈತ್ಯ ಬೌಲರ್ಗಳನ್ನು ಕೆಚ್ಚೆದೆಯಿಂದ ಎದುರಿಸಿ ಬರೋಬ್ಬರಿ 774 ರನ್ ಸಿಡಿಸಿದ್ದರು. ಪಾದಾರ್ಪಣೆ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ!
ಬಿಸಿಸಿಐ ಅಹ್ಮದಾಬಾದ್ ಟೆಸ್ಟ್ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್ ಅವರಿಗೆ ಇಂದು ವಿಶೇಷ ಕ್ಯಾಪ್ ಅನ್ನು ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಬಿಸಿಸಿಐ ಅವರಿಗೆ ಗೌರವ ಸಮರ್ಪಿಸಿದೆ.