ಮುಂಬೈ: ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಜರ್ಸಿ ನಂಬರ್12 ಅನ್ನು ನಿವೃತ್ತಿಗೊಳಿಸಿ ಎಂದು ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಮನವಿ ಮಾಡಿದ್ದಾರೆ.
ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಯುವರಾಜ್ ಸಿಂಗ್ ಅವರ ಜರ್ಸಿ ಸಂಖ್ಯೆಯನ್ನು ಯಾವ ಆಟಗಾರನಿಗೂ ನೀಡಬಾರದು. ದಯವಿಟ್ಟು 12 ಜರ್ಸಿ ಸಂಖ್ಯೆಯನ್ನು ನಿವೃತ್ತಿ ಎಂದು ಘೋಷಿಸಿ ಎಂದು ಗಂಭೀರ್ ಬಿಸಿಸಿಐಗೆ ಈ ಮನವಿ ಮಾಡಿಕೊಂಡಿದ್ದಾರೆ.
'ಸೆಪ್ಟಂಬರ್ ತಿಂಗಳು ಬಂತೆಂದರೆ ನನ್ನಲ್ಲಿ ವಿಶೇಷ ಭಾವನೆ ಮೂಡುತ್ತದೆ. 2007 ಸೆಪ್ಟಂಬರ್ ತಿಂಗಳಲ್ಲೇ ನಾವು ಟಿ20 ವಿಶ್ವಕಪ್ ಗೆದ್ದಿದ್ದೆವು. ಇದರಲ್ಲಿ ಯುವರಾಜ್ ಸಿಂಗ್ ಪಾತ್ರ ಮರೆಯಲಾಗುವುದಿಲ್ಲ. ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತಕ್ಕೆ ಚೊಚ್ಚಲ ಟಿ20 ಚಾಂಪಿಯನ್ ಗೌರವ ಒಲಿದಿತ್ತು ಎಂದು ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್ ಆದ ಗೌತಮ್ ಗಂಭೀರ್ ಟೈಮ್ಸ್ ಆಫ್ ಇಂಡಿಯಾಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು 2011ರ ಏಕದಿನ ವಿಶ್ವಕಪ್ನಲ್ಲೂ ಕೂಡ ಯುವರಾಜ್ ಸಿಂಗ್ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ್ದರು. 28 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಯುವಿ ಧರಿಸುತ್ತಿದ್ದ ಜೆರ್ಸಿ ನಂಬರ್ 12 ಅನ್ನು ಬಿಸಿಸಿಐ ನಿವೃತ್ತಿಯೆಂದು ಘೋಷಿಸುವಂತೆ ಗಂಭೀರ್ ಆಗ್ರಹಿಸಿದ್ದಾರೆ.