ನವದೆಹಲಿ:ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಲೋಧ ಸಮಿತಿಯ ನಿಯಮಗಳ ಪ್ರಕಾರ ಅರ್ಹತೆ ಹೊಂದಿಲ್ಲ ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ಹಿರಿಯ ಪತ್ರಕರ್ತ ರಜತ್ ಶರ್ಮಾ ರಾಜೀನಾಮೆ ನೀಡಿದ್ದರು. ಇದಾದ ನಂತರ ಭಾನುವಾರ ಡಿಡಿಸಿಎ ವಾರ್ಷಿಕ ಸಭೆಯಲ್ಲಿ ಗಲಾಟೆ ನಡೆದ ಬೆನ್ನಲ್ಲೇ ಗೌತಮ್ ಗಂಭೀರ್ರನ್ನು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಕೆಲವು ಡಿಡಿಸಿಎ ಅಧಿಕಾರಿಗಳು ಕೇಳಿಕೊಂಡಿದ್ದರು.
ಆದರೆ ಡಿಡಿಸಿಎ ಅಧ್ಯಕ್ಷ ಚುನಾವಣೆಗೆ ಗಂಭೀರ್ ಹೆಸರು ಕೇಳಿಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ವಿನೋದ್ ತಿಹರ, "ಡೆಲ್ಲಿ ಕ್ರಿಕೆಟ್ ಸಂಸ್ಥೆಗೆ ಗಂಭೀರ್ ಸೇವೆ ಸಲ್ಲಿಸಲು ಬಯಸುವುದಾದರೆ ಅವರು ತಮ್ಮ ಸಂಸದ ಪದವಿಯನ್ನು ತ್ಯಜಿಸಿದರೆ ಮಾತ್ರ ಸಾಧ್ಯ" ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ನಡೆದ ಡಿಡಿಸಿಎ ವಾರ್ಷಿಕ ಸಭೆಯಲ್ಲಿ ಅಧಿಕಾರಿಗಳು ಪರಸ್ಪರ ಕೈ ಕೈ ಕೈಮಿಲಾಯಿಸಿಕೊಂಡಿದ್ದರು. ಈ ವರ್ತನೆಯನ್ನು ಗಂಭೀರ್ ಟ್ವೀಟ್ ಮೂಲಕ ಖಂಡಿಸಿದ್ದರು. ಡಿಡಿಸಿಎಯನ್ನು ರದ್ದು ಮಾಡಿ, ಗಲಾಟೆ ಮಾಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಜವಾಬ್ದಾರಿಯನ್ನು ಗಂಭೀರ್ಗೆ ನೀಡುವಂತೆ ಕೆಲವು ಡಿಡಿಸಿಎ ಅಧಿಕಾರಿಗಳು ಒತ್ತಾಯಿಸಿದ್ದರು.
ಆದರೆ ವಿನೋದ್ ಶರ್ಮಾ ಹೇಳಿಕೆ ಗೌತಮ್ ಗಂಭೀರ್ ಸೇರಿದಂತೆ ಅವರ ಬೆಂಬಲಿಗರಿಗೆ ನಿರಾಶೆ ತರಿಸಿದೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕ ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಡಿಡಿಸಿಎ ಅಧಿಕಾರಿಗಳು ಮನವಿ ಮಾಡಿದ್ದಾರೆಂದು ತಿಳಿದುಬಂದಿದ್ದು, ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.