ನವದೆಹಲಿ:ಟೀಂ ಇಂಡಿಯಾದ ಮಾಜಿ ಆರಂಭಿಕ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಇದೀಗ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆ ಮಾಡಲು ನಿರ್ಧರಿಸಿದ್ದಾರೆ.
ದೆಹಲಿಯ ಜಿ.ಬಿ.ರಸ್ತೆಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಪೋಷಣೆಗೆ ಅವರು ಮುಂದಾಗಿದ್ದಾರೆ. ಶಾಲಾ ಖರ್ಚು, ಆರೋಗ್ಯ ಸೇರಿದಂತೆ ಎಲ್ಲ ವೆಚ್ಚಗಳನ್ನೂ ತಾವೇ ನೋಡಿಕೊಳ್ಳಲು ತೀರ್ಮಾನಿಸಿ ಅಸಂಘಟಿತ ಸಮುದಾಯದ ಜನರ ಮಕ್ಕಳ ಬದುಕಿಗೆ ಆಶಾಕಿರಣವಾಗಿದ್ದಾರೆ.
ಗೌತಮ್ ಗಂಭೀರ್ ಫೌಂಡೇಶನ್ ಮೂಲಕ ಮಕ್ಕಳ ಸರ್ವತೋಮುಖ ಖರ್ಚುವೆಚ್ಚ ನೋಡಿಕೊಂಡು ಸಲಹುವ ಕೆಲಸವನ್ನು ಗಂಭೀರ ಮಾಡಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, PANKH ಎಂಬ ಕಾರ್ಯಕ್ರಮ ಆರಂಭಿಸುತ್ತಿದ್ದು, ಅದರಲ್ಲಿ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಎಲ್ಲ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಇದರ ಜತೆಗೆ ಬೇರೆಯವರು ಕೂಡಾ ಇಂತಹ ಕೆಲಸಗಳಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ದೇಶದ ಗಡಿ ಕಾಯುತ್ತಿದ್ದ ವೇಳೆ ಹುತಾತ್ಮರಾಗಿರುವ 200 ಯೋಧರ ಮಕ್ಕಳ ಜವಾಬ್ದಾರಿ ಹೊತ್ತುಕೊಂಡಿರುವ ಗಂಭೀರ್, ಇದೀಗ ಮತ್ತೊಂದು ಜನ ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ.