ಹೈದರಾಬಾದ್: ಯಶಸ್ವಿಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇದೀಗ 2021ರ ಟಿ-20 ವಿಶ್ವಕಪ್ ಆಯೋಜನೆಗೆ ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆ ಟಿ-20 ವಿಶ್ವಕಪ್ ಟ್ರೋಫಿಯೊಂದಿಗೆ ನಿಂತಿರುವ ಫೋಟೋ ಪೋಸ್ಟ್ ಮಾಡಿರುವ ಸೌರವ್ ಗಂಗೂಲಿ 2021ರ ಟಿ-20 ವಿಶ್ವಕಪ್ ಅನ್ನು ಟೀಂ ಇಂಡಿಯಾ ಆಯೋಜಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಆರನೇ ಟಿ-20 ವಿಶ್ವಕಪ್ ಪಂದ್ಯ ನಡೆದು 5 ವರ್ಷಗಳ ಬಳಿಕ ಏಳನೇ ಟೂರ್ನಿ ಆಯೋಜನೆಗೆ ಭಾರತ ಸಿದ್ಧವಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತದಲ್ಲಿ 2021ರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿರುವುದು ಅತ್ಯಂತ ಗೌರವದ ವಿಚಾರ ಎಂದಿದ್ದಾರೆ.
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಧಿಕೃತ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೌರವ್ ಗಂಗೂಲಿ "ಓರ್ವ ಆಟಗಾರನಾಗಿ ನಾನು ಸಾಕಷ್ಟು ಆಟವನ್ನು ಅನಂದಿಸಿದ್ದೇನೆ. ಹೀಗಾಗಿ ಈ ನೆಲದ ಕ್ರೀಡಾ ಅನುಭವ ನನಗೆ ತಿಳಿದಿದೆ. ಇದೀಗ ಓರ್ವ ಆಡಳಿತಾಧಿಕಾರಿಯಾಗಿ ಜಾಗತಿಕ ಟೂರ್ನಿ ಆಯೋಜನೆಗೆ ಎದುರು ನೋಡುತ್ತಿದ್ದೇನೆ" ಎಂದು ಗಂಗೂಲಿ ಹೇಳಿದ್ದಾರೆ.
1987ರಲ್ಲಿ ಭಾರತ ಮೊದಲ ಬಾರಿಗೆ ಪುರುಷರ ವಿಶ್ವಕಪ್ ಟೂರ್ನಿ ಆಯೋಜನೆ ಮಾಡಿತ್ತು. ಆ ನಂತರ ಭಾರತವು ಹಲವಾರು ಜಾಗತಿಕ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುವ ಭಾರತದಲ್ಲಿ ಆಟವಾಡಲು ವಿಶ್ವದಾದ್ಯಂತ ಕ್ರಿಕೆಟಿಗರು ಉತ್ಸುಕರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಐಸಿಸಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಗಂಗೂಲಿ ಹೇಳಿದ್ದಾರೆ.