ಕ್ರೈಸ್ಟ್ಚರ್ಚ್: ಭಾರತ ತಂಡ ಕಿವೀಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು 2-0ಯಲ್ಲಿ ಕಳೆದುಕೊಂಡು ನಿರಾಶೆಯನುಭವಿಸಿದೆ. ಆದರೆ ಈ ವೈಟ್ ವಾಸ್ ಮುಖಭಂಗ 18 ವರ್ಷಗಳ ಹಿಂದೆ ದಾದಾ ನೇತೃತ್ವದ ಭಾರತ ತಂಡಕ್ಕೂ ಸಂಭವಿಸಿತ್ತು. ಆಶ್ಚರ್ಯವೆಂದರೆ ಅಂದು ಕೂಡ ಪದಾರ್ಪಣೆ ಮಾಡಿದ್ದ ಹೊಸ ಬೌಲರ್ಗಳೆ!.
ಭಾರತ ತಂಡ ವೆಲ್ಲಿಂಗ್ಟನ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳಿಂದ ಶರಣಾದರೆ, ಎರಡನೇ ಪಂದ್ಯದಲ್ಲಿ 6 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದರೂ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಕಡಿಮೆ ಮೊತ್ತದ ಟಾರ್ಗೆಟ್ ನೀಡಿ 7 ವಿಕೆಟ್ಗಳಿಂದ ಸೋಲುಕಂಡಿತ್ತು.
ಸ್ವಾರಸ್ಯರಕರ ಸಂಗತಿ ಎಂದರೆ 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಕೂಡ 2 ಟೆಸ್ಟ್ ಪಂದ್ಯಗಳನ್ನು ಇದೇ ರೀತಿ ಕಳೆದುಕೊಂಡಿತ್ತು.
ಟಾಸ್ನಲ್ಲಿ ಸೋಲು:
2002 ಹಾಗೂ 2020 ಎರಡೂ ಸರಣಿಗಳಲ್ಲೂ ಭಾರತ ವಿರುದ್ಧ ನ್ಯೂಜಿಲ್ಯಾಂಡ್ ಟಾಸ್ ಗೆದ್ದಿದ್ದಲ್ಲದೆ. ಒಟ್ಟು 4 ಇನ್ನಿಂಗ್ಸ್ನಲ್ಲೂ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರತ ತಂಡ 2002ರಲ್ಲಿ 161,99,165 ಹಾಗೂ 242 ರನ್ಗಳಿಗೆ ಆಲೌಟ್ ಆಗಿತ್ತು. 2020ರಲ್ಲಿ 165, 191, 242 ಹಾಗೂ 124 ರನ್ಗಳಿಗೆ ಆಲೌಟ್ ಆಗಿದೆ.
ಎರಡೂ ಪಂದ್ಯಗಳಲ್ಲೂ ಸೋಲು:
ಎರಡು ಸಂದರ್ಭದಲ್ಲಿ ಮೊದಲ ಪಂದ್ಯವನ್ನು ಭಾರತ ತಂಡ 10 ವಿಕೆಟ್ಗಳಿಂದ ಸೋಲುಕಂಡಿದೆ. 2002ರಲ್ಲಿ 36 ರನ್ ಟಾರ್ಗೆಟ್ ನೀಡಿದರೆ, 2020ರಲ್ಲಿ ಕೇವಲ 9 ರನ್ ಟಾರ್ಗೆಟ್ ನೀಡಿತ್ತು.
ಎರಡನೇ ಟೆಸ್ಟ್ನಲ್ಲಿ ಎರಡು ಸರಣಿಯಲ್ಲೂ ಭಾರತ ಮೊದಲ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿತ್ತು. 2002ರಲ್ಲಿ 5 ರನ್ ಲೀಡ್ ಪಡೆದರೆ, 2020ರಲ್ಲಿ 7 ರನ್ ಮುನ್ನಡೆ ಪಡೆದಿತ್ತು. ಆದರೂ ಮುನ್ನಡೆಯನ್ನು ಸದುಪಯೋಗಪಡಿಸಿಕೊಳ್ಳದೆ ಅಂದು ನಾಲ್ಕು ವಿಕೆಟ್ಗಳಿಂದ ಸೋಲುಕಂಡರೆ, ಇಂದು 7 ವಿಕೆಟ್ಗಳಿಂದ ಸೋಲುಕಂಡಿದೆ.
ಎರಡೂ ಸರಣಿಯಲ್ಲಿ ಸೆಂಚುರಿ ಇಲ್ಲ
ವಿಶೇಷವೆಂದರೆ ಈ ಎರಡು ಸರಣಿಗಳಲ್ಲೂ ಎರಡು ಕಡೆಯ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಸೆಂಚುರಿ ಬಾರಿಸುವಲ್ಲಿ ವಿಫಲರಾಗಿದ್ದರು. 2002 ರಲ್ಲಿ ಮಾರ್ಕ್ ರಿಚಡ್ಸನ್ 89 ರನ್ಗಳಿಸಿದ್ದು, 2020ರಲ್ಲಿ ಕೇನ್ ವಿಲಿಯಮ್ಸನ್ 89 ರನ್ಗಳಿಸಿದ್ದೇ ಗರಿಷ್ಠ ರನ್ ಆಗಿದೆ. ಈ ಎರಡು ಸ್ಕೋರ್ಗಳು ಸಹಾ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೇ ಬಂದಿವೆ.
ಅತಿ ಹೆಚ್ಚು ಸ್ಕೋರ್ ಕನ್ನಡಿಗರದ್ದು
ಭಾರತ ತಂಡದ ಆಟಗಾರರಿಂದ ಇವೆರಡೇ ಸರಣಿಗಳಲ್ಲಿ ಮಾತ್ರ ಒಂದು ಶತಕ ದಾಖಲಿಸಿಲ್ಲ. ಇವೆರಡೂ ಟೆಸ್ಟ್ಗಳ ಮಧ್ಯೆ 60 ಟೆಸ್ಟ್ ಪಂದ್ಯಗಳನ್ನಾಡಿದ್ದು ಕಡಿಮೆಯೆಂದರೂ ಸರಣಿಯಲ್ಲಿ ಒಂದಾದರು ಶತಕ ದಾಖಲಾಗಿದೆ. 2002ರಲ್ಲಿ ಕನ್ನಡಿಗ ದ್ರಾವಿಡ್ ಸಿಡಿಸಿದ 76 ರನ್ ಗರಿಷ್ಠವಾದರೆ, 2020ರಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್ ಸಿಡಿಸಿದ 58 ರನ್ ಭಾರತದ ಗರಿಷ್ಠ ರನ್ ಆಗಿದೆ.
ಇಡೀ ಸರಣಿಯಲ್ಲಿ 100ರ ಗಡಿದಾಟಿದ್ದು ಇಬ್ಬರೇ!
ಇನ್ನು ಇವೆರಡು ಸರಣಿಗಳಲ್ಲಿ ಭಾರತ ತಂಡದ ಇಬ್ಬರು ಆಟಗಾರರು ಮಾತ್ರ ನಾಲ್ಕು ಇನ್ನಿಂಗ್ಸ್ಗಳಿಂದ 100ರ ಗಡಿದಾಟಿದ್ದರು. 2002 ರಲ್ಲಿ ಸಚಿನ್, 2020ರಲ್ಲಿ ಚೇತೇಶ್ವರ್ ಪೂಜಾರ 100ರ ಗಡಿದಾಟಿದ್ದಾರೆ. ಭಾರತ 2002ರಲ್ಲಿ ಒಂದು ವಿಕೆಟ್ಗೆ 13.37 ರನ್ಗಳಿಸಿದ್ದರೆ, 2020ರಲ್ಲಿ 18.05 ರನ್ ದಾಖಲಿಸಿದೆ. ಇವೆರಡು ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಪ್ರತಿಯೊಂದಿ ವಿಕೆಟ್ಗೆ ಗಳಿಸಿದ ಅತ್ಯಂತ ಕಡಿಮೆ ರನ್ ಆಗಿದೆ.
ನಾಯಕರ ಅಂಕಿ-ಅಂಶ
2002ರಲ್ಲಿ ನಾಯಕ ಸೌರವ್ ಗಂಗೂಲಿ ನಾಲ್ಕು ಇನ್ನಿಂಗ್ಸ್ಗಳಲ್ಲಿ 29 ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅವರ ಸರಾಸರಿ 7.25 ಆಗಿತ್ತು. 2020ರ ನಾಯಕ ವಿರಾಟ್ ಕೊಹ್ಲಿ 4 ಇನ್ನಿಂಗ್ಸ್ಗಳಲ್ಲಿ 38 ರನ್ಗಳಿಸಿದ್ದಾರೆ, ಇವರು ಸರಾಸರಿ 9.50 ಆಗಿದೆ.
ಪದಾರ್ಪಣೆ ಮಾಡಿದ ಆಲ್ರೌಂಡರ್ಗಳಿಂದಲೇ ಸೋಲು
2002ರಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ಜೇಕಬ್ ಓರಮ್ 2020ರಲ್ಲಿ ಕೈಲ್ ಜೇಮೀಸನ್ ತಂಡದಕ್ಕೆ ಪದಾರ್ಪಣೆ ಮಾಡಿದ್ದರು. ಓರಮ್ ಇಡೀ ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರೆ, ಜೇಮಿಸನ್ 2020ರಲ್ಲಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಆಗಿದ್ದಾರೆ.
ಓರಮ್ 11 ವಿಕೆಟ್ ಹಾಗೂ ಎರಡನೇ ಟೆಸ್ಟ್ನ ನಾಲ್ಕನೇ ಇನ್ನಿಂಗ್ಸ್ನಲ್ಲಿ ಔಟಾಗದೆ 26 ರನ್ಗಳಿಸಿ ಕ್ಲೀನ್ಸ್ವೀಪ್ ಸಾಧನೆಗೆ ನೆರವಾಗಿದ್ದರು. 2020ರಲ್ಲಿ ಜೇಮಿಸನ್ 9 ವಿಕೆಟ್ ಪಡೆದಿದ್ದಲ್ಲದೆ, ಎರಡು ಟೆಸ್ಟ್ಗಳ ಮೊದಲ ಇನ್ನಿಂಗ್ಸ್ಗಳಲ್ಲಿ 49 ಹಾಗೂ 44 ರನ್ಗಳಿಸಿದ್ದರು.