ಕೋಲ್ಕತ್ತಾ:ಕೊರೊನಾ ಲಾಕ್ಡೌನ್ನಿಂದಾಗಿ ಪ್ರತಿದಿನ ಬಡ ಜನರು ಊಟಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಹಾಯಕರಿಗೆ ಜನರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ಇಸ್ಕಾನ್ ಜೊತೆ ಖ್ಯಾತ ಕ್ರಿಕೆಟಿಗ ಹಾಗು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೈ ಜೋಡಿಸಿದ್ದಾರೆ.
ಪ್ರತಿದಿನ ಹೆಚ್ಚುವರಿ 10 ಸಾವಿರ ಜನರಿಗೆ ಆಹಾರ ನೀಡಲು ಇಸ್ಕಾನ್ಗೆ ಗಂಗೂಲಿ ಸಹಾಯ ಹಸ್ತ
ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಪ್ರತಿದಿನ 10 ಸಾವಿರ ಹೆಚ್ಚುವರಿ ಜನರಿಗೆ ಆಹಾರ ತಲುಪುವಂತೆ ಮಾಡುವಲ್ಲಿ ಇಸ್ಕಾನ್ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ದೇಶದ ಜನರಿಗೆ ಅಗತ್ಯ ಸಲಹೆಯನ್ನೂ ನೀಡಿದ್ದಾರೆ.
ಕೋಲ್ಕತ್ತಾದಲ್ಲಿರುವ ಇಸ್ಕಾನ್ ಸೆಂಟರ್ನಲ್ಲಿ ಈ ಹಿಂದೆ ಕೇವಲ 10 ಸಾವಿರ ಜನರಿಗೆ ಆಹಾರ ತಯಾರು ಮಾಡಿ ವಿತರಣೆ ಮಾಡಲಾಗುತ್ತಿತ್ತು. ಆದರೀಗ ದಾದಾ ಕೈಜೋಡಿಸಿದ್ದರಿಂದ ಅದರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದೆ. ದೇಶವ್ಯಾಪಿ ಇಸ್ಕಾನ್ ಪ್ರತಿದಿನ ಬರೋಬ್ಬರಿ 4 ಲಕ್ಷ ಜನರಿಗೆ ಆಹಾರ ವಿತರಿಸುತ್ತಿದೆ.
ಬೇಲೂರು ರಾಮಕೃಷ್ಣ ಮಠಕ್ಕೆ ತೆರಳಿ 20 ಸಾವಿರ ಕೆ.ಜಿ ದೇಣಿಗೆ ನೀಡಿರುವ ದಾದಾ, ಇದೀಗ ಇಸ್ಕಾನ್ ಜೊತೆ ಕೈಜೋಡಿಸಿದ್ದಾರೆ. ಈ ಹಿಂದೆ ಪಿಎಂ ಕೇರ್ಸ್ಗೆ ಉದಾರವಾಗಿ ಧನ ಸಹಾಯ ಮಾಡುವಂತೆ ಕೇಳಿಕೊಳ್ಳುವಂತೆ ಜನರಲ್ಲಿ ಮನವಿ ಅವರು ಮಾಡಿಕೊಂಡಿದ್ದರು. ಜೊತೆಗೆ 51 ಲಕ್ಷ ರೂ ಮೌಲ್ಯದ ಅಕ್ಕಿ ದೇಣಿಗೆ ನೀಡುವುದಾಗಿಯೂ ಗಂಗೂಲಿ ಘೋಷಿಸಿದ್ದರು. ಇದಾದ ಬಳಿಕ ನಿನ್ನೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ವಿಡಿಯೋ ಸಂವಾದದಲ್ಲಿಯೂ ಪಾಲ್ಗೊಂಡು ಅಗತ್ಯ ಸಲಹೆ ನೀಡಿದ್ದಾರೆ.