ಕೋಲ್ಕತ್ತಾ: ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜನ್ಮದಿನದ ನಿಮಿತ್ತ ಕೋಲ್ಕತ್ತಾದ ಅಭಿಮಾನಿ ಬಳಗವೊಂದು ಗಂಗೂಲಿ ಫೋಟೋ ಇರುವ ಮಾಸ್ಕ್ ವಿತರಣೆ ಮಾಡುವ ಮೂಲಕ ದಾದಾ ಹುಟ್ಟಿದ ಹಬ್ಬವನ್ನು ವಿಶೇಷವಾಗಿ ಆಚರಿಸಿದೆ.
ಮಹಾರಾಜೆರ್ ದರ್ಬಾರೆ ಎಂಬ ಗಂಗೂಲಿ ಅಭಿಮಾನಿ ಬಳಗ, ಗಂಗೂಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಫೋಟೋ ಹಾಗೂ ಮತ್ತೊಂದು ಕಡೆ ಬಿಸಿಸಿಐ ಅಧ್ಯಕ್ಷರಾಗಿರುವ ಫೋಟೋ ಇರುವ ಮಾಸ್ಕ್ಗಳನ್ನು ಉಚಿತವಾಗಿ ನೀಡುತ್ತಿದೆ. ಇನ್ನು ಇದನ್ನು ಹಣಕೊಟ್ಟು ಕೊಳ್ಳಲು ಬಯಸಿದವರಿಗೆ 50 ರೂಗಳಿಗೆ ಮಾರಾಟ ಕೂಡ ಮಾಡಲಾಗುತ್ತಿದೆ.
ಈ ಅಭಿಮಾನಿಗಳು ರಾಜ್ಯಾದ್ಯಂತ ಸುಮಾರು 10 ಸಾವಿರ ಸದಸ್ಯರನ್ನು ಒಳಗೊಂಡಿದ್ದು, ಮಾಸ್ಕ್ಗಳನ್ನು ಗಂಗೂಲಿ ಅವರಿಗೆ ನೀಡಲು ಬುಧವಾರ ಅವರ ಬೆಹಾಲಾ ಮನೆಗೆ ಭೇಟಿ ನೀಡಿದೆ ಎಂದು ತಿಳಿದು ಬಂದಿದೆ.
ಈ ಕಠಿಣ ಸಂದರ್ಭದಲ್ಲಿ ಕೇಕ್ ಕಟ್ ಮಾಡಿಸಿ ಅವರ ಜನ್ಮದಿನವನ್ನ ಆಚರಿಸುವುದು ಸರಿಯಲ್ಲ ಎಂದು ನಮಗೆ ತಿಳಿದಿದೆ. ಅದಕ್ಕಾಗಿ ನಾವೇ ತಯಾರು ಮಾಡಿರುವ ಈ ಮಾಸ್ಕ್ಗಳನ್ನು ಅವರಿಗೆ ಉಡುಗೊರೆಯಾಗಿ ನೀಡಲಿದ್ದೇವೆ ಎಂದು ಗಂಗೂಲಿ ಅಭಿಮಾನಿ ಬಳಗದ ವ್ಯವಸ್ಥಾಪಕರಾದ ಸಯನ್ ಸಮಂತಾ ಎಂಬುವವರು ತಿಳಿಸಿದ್ದಾರೆ.
ಇನ್ನು ಮಾಸ್ಕ್ಗಳ ಮಾರಾಟದಿಂದ ಬಂದ ಹಣವನ್ನು ದಾದಾ 48ನೇ ಜನ್ಮದಿನದ ಪ್ರಯುಕ್ತ 48 ಬಡ ಕುಟುಂಬಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡುವ ಉದ್ದೇಶ ತಮ್ಮ ಸಂಘಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.