ಪ್ಲೋರಿಡಾ (ಅಮೆರಿಕ): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸೈನಿ ಮೊದಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಅವರ ಕ್ರಿಕೆಟ್ ಗುರು ಗಂಭೀರ್, ಸೈನಿ ಕ್ರಿಕೆಟ್ ಜೀವನಕ್ಕೆ ಆರಂಭದಲ್ಲಿ ಮುಳುವಾಗಿದ್ದ ಹಿರಿಯ ಆಟಗಾರರನ್ನು ತೆಗಳುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಕೇವಲ ಟೆನ್ನಿಸ್ ಬಾಲ್ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸಮಾನ್ಯ ಮಧ್ಯಮ ವರ್ಗದ ಯುವಕನಿಗೆ ಆತ್ಮವಿಶ್ವಾಸ ತುಂಬಿ ಆತನ ಕ್ರಿಕೆಟ್ ಜೀವನಕ್ಕೆ ಜೀವ ತುಂಬಿದ್ದ ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಖುಷಿ ವಿಚಾರವನ್ನು ಕೋಪದ ಮೂಲಕ ತಿಳಿಸಿದ್ದಾರೆ. ಅದಕ್ಕೆ ಕಾರಣ ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್ ಸಿಂಗ್ ಬೇಡಿ ಹಾಗೂ ಚೇತನ್ ಚೌಹಾನ್ ಎಂಬುದು ಹಳೆ ವಿಚಾರ.
ರಣಜಿ ಕ್ರಿಕೆಟ್ಗೆ ತಂಡದ ಆಯ್ಕೆಯ ವೇಳೆ ಸೈನಿಯನ್ನು ಸ್ಥಳೀಯನಲ್ಲ ಎಂದು ಬೇಡಿ ಹಾಗೂ ಚೌಹಾನ್ ಆಯ್ಕೆ ಮಾಡಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಗಂಭೀರ್ ಅವರಿಬ್ಬರ ವಿರುದ್ಧ ಕಿಡಿ ಕಾರಿದ್ದರು. ಗಂಭೀರ್ ಹೋರಾಟ ಮಾಡಿ ತಮ್ಮ ಹಠದಿಂದ ರಣಜಿಯಲ್ಲಿ ಸೈನಿಗೆ ಅವಕಾಶ ಕೊಡಿಸಿದ್ದರು. ನಂತರ ಸೈನಿ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲೂ ಅವರಿಬ್ಬರನ್ನು ಕಾಲೆಳೆದಿದ್ದ ಗಂಭೀರ್ ಇಂದೂ ಕೂಡ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಸೈನಿ ಮೊದಲ ಓವರ್ನಲ್ಲೇ ಎರಡು ವಿಕೆಟ್ ಪಡೆಯುತ್ತಿದ್ದಂತೆ ಟ್ವೀಟ್ ಮಾಡಿರುವ ಗಂಭೀರ್ " ಸೈನಿ ಭಾರತ ತಂಡದ ಪರ ನಿನ್ನ ಪದಾರ್ಪಣೆ ಅದ್ಭುತವಾಗಿತ್ತು. ಮೊದಲ ಓವರ್ನಲ್ಲೇ 2 ವಿಕೆಟ್ ಪಡೆದಿದ್ದೀಯ. ಈ ಪ್ರದರ್ಶನ ನೋಡಿ ಬಿಷನ್ ಸಿಂಗ್ ಬೇಡಿ ಹಾಗೂ ಚೇತನ ಶರ್ಮಾರಿಗೆ ತಮ್ಮ ಮಧ್ಯದ ವಿಕೆಟ್ ಬಿದ್ದಂತಾಗಿದೆ. ನೀನು ಮೈದಾನಕ್ಕಿಳಿಯುವ ಮುನ್ನವೇ ನಿನ್ನನ್ನು ತುಳಿಯಲು ನೋಡಿದವರಿಗೆ ಅವಮಾನವಾಗಿದೆ" ಎಂದು ಟ್ವೀಟ್ ಮೂಲಕ ಮಾಜಿ ಆಟಗಾರರ ಕಾಲೆಳೆದಿದ್ದಾರೆ.
ಇದು ಕಳೆದ ವರ್ಷದ ಟ್ವೀಟ್.