ಮುಂಬೈ: ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಕೊಹ್ಲಿಗಿಂತ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಲೈವ್ ಸಂದರ್ಶನದಲ್ಲಿ ಕೊಹ್ಲಿ- ಸಚಿನ್ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂಬ ಪ್ರಶ್ನೆಗೆ ಉತ್ತರಿಸಿದ ಗಭೀರ್, ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ಹೆಸರನ್ನು ಸೂಚಿಸಿದ್ದಾರೆ.
‘ಸಚಿನ್ ತಂಡೂಲ್ಕರ್, ಏಕೆಂದರೆ ಅವರು ಆಡುತ್ತಿದ್ದ ಕಾಲದಲ್ಲಿ ಒಂದೇ ಬಾಲ್, 4 ಫೀಲ್ಡರ್ಗಳು ಸರ್ಕಲ್ ಒಳಗಿರುತ್ತಿರುದ್ದರು. ಇದರಿಂದ ರನ್ಗಳಿಸಲು ತುಂಬಾ ಕಷ್ಟವಿತ್ತು. ಆದ್ದರಿಂದ ಕೊಹ್ಲಿಗಿಂತಲೂ ಸಚಿನ್ ತೆಂಡೂಲ್ಕರ್ ಬೆಸ್ಟ್ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.
ಕೊಹ್ಲಿಯೂ ಕೂಡ ಕ್ರಿಕೆಟ್ನಲ್ಲಿ ಸಾಧಿಸಿದ್ದಾರೆ. ಆದರೆ ಆ ಕಾಲಕ್ಕೂ, ಈ ಕಾಲಕ್ಕೂ ಕ್ರಿಕೆಟ್ ನಿಯಮಗಳು ಬದಲಾಗಿವೆ. ಅಂದು ಬೌಲರ್ಗಳಿಗೆ ನಿಯಮಗಳು ನೆರವಾಗುತ್ತಿದ್ದವು, ಆದರೆ ಇಂದಿನ ಕ್ರಿಕೆಟ್ ನಿಯಮಗಳು ಬ್ಯಾಟ್ಸಮ್ಗಳಿಗೆ ತುಂಬಾ ನೆರವಾಗುತ್ತಿವೆ ಎಂದಿದ್ದಾರೆ.
ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 49 ಶತಕ ಸಹಿತ 18426, ಕೊಹ್ಲಿ 239 ಏಕದಿನ ಪಂದ್ಯಗಳಿಂದ 43 ಶತಕ ಸಹಿತ 11867 ರನ್ಗಳಿಸಿದ್ದಾರೆ.
ಪ್ರಸ್ತುತ ಏಕದಿನ ಕ್ರಿಕೆಟ್ನಲ್ಲಿ 2 ಹೊಸ ಬಾಲ್ಗಳನ್ನು ಬಳಸಲಾಗುತ್ತಿದೆ. ರಿವರ್ಸ್ ಸ್ವಿಂಗ್ ಇಲ್ಲ, ಫಿಂಗ್ರ್ ಸ್ಪಿನ್ ಇಲ್ಲ 50 ಓವರ್ಗಳವರೆಗೂ 5 ಫೀಲ್ಡರ್ ಸರ್ಕಲ್ ಒಳಗಿರುತ್ತಾರೆ. ಇವೆಲ್ಲಾ ನಿಯಮಗಳು ಬ್ಯಾಟ್ಸ್ಮನ್ಗಳ ನೆಚ್ಚಿನದ್ದಾಗಿವೆ.
ಆದರೆ ಸಚಿನ್ ಬೇರೆ ರೀತಿಯ ನಿಯಮಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಅವರ ಕಾಲದಲ್ಲಿ 230 ಯಿಂದ 240 ರನ್ ಕೂಡ ಮ್ಯಾಚ್ ಗೆಲ್ಲುವ ಇನ್ನಿಂಗ್ಸ್ ಆಗುತ್ತಿತ್ತು. ಆದ್ದರಿಂದ ನಾನು ಕೊಹ್ಲಿಗಿಂತಲೂ ಸಚಿನ್ರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದ ಗಂಭೀರ್ ತಿಳಿಸಿದ್ದಾರೆ.