ಕೋಲ್ಕತ್ತಾ:ಟೀಂ ಇಂಡಿಯಾ ಪರ 12 ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳನ್ನ ಆಡಿರುವ ಪಶ್ಚಿಮ ಬಂಗಾಳ ಮೂಲದ ಕ್ರಿಕೆಟ್ ಆಟಗಾರ ಮನೋಜ್ ತಿವಾರಿಗೆ ಯಾಕೋ ಅದೃಷ್ಟ ಕೈ ಕೊಟ್ಟಿದೆ. ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರೂ ಆಯ್ಕೆ ಸಮಿತಿ ಮಾತ್ರ ಕಡೆಗಣಿಸುತ್ತಾ ಬಂದಿದ್ದು ತಿವಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ಆಯ್ಕೆಯಾಗುವ ಇಂಗಿತ ಹೊಂದಿದ್ದ ತಿವಾರಿಗೆ ಶಾಕ್ ಆಗಿದ್ದು, ಮನೋಜ್ ತಿವಾರಿಯನ್ನ ಆಯ್ಕೆ ಸಮಿತಿ ಕಡೆಗಣಿಸಿದೆ. ಇದರಿಂದ ಕೋಪಗೊಂಡಿರುವ ತಿವಾರಿ ಆಯ್ಕೆ ಸಮಿತಿ ವಿರುದ್ಧ ಟ್ವಿಟರ್ನಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ತಿವಾರಿ, 2018-19ನೇ ದುಲೀಪ್ ಟ್ರೋಫಿ ಟೂರ್ನಿಗೆ ತಂಡವನ್ನ ಆಯ್ಕೆ ಮಾಡಿದಾಗಿನಿಂದ ನಾನು ಗಮನಿಸುತ್ತಿದ್ದೇನೆ. ಎಲ್ಲೂ ಕೂಡ ನನ್ನ ಹೆಸರು ಕಾಣುತ್ತಿಲ್ಲ. ಟೀಂ ಇಂಡಿಯಾ ಅಥವಾ ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆ ಸಮಿತಿ ಯಾವ ಮಾನದಂಡದ ಮೇಲೆ ಆಟಗಾರರನ್ನ ಆಯ್ಕೆ ಮಾಡುತ್ತಿದೆ ಎಂದು ಕೇಳಲು ಬಯಸುತ್ತೇನೆ.
ಕಳೆದ ವರ್ಷದ ವಿಜಯ್ ಹಜಾರೆ ಮತ್ತು ದೇವಧರ್ ಟ್ರೋಫಿಯ ಏಕದಿನ ಕ್ರಿಕೆಟ್ನಲ್ಲಿ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿದ ನಾನು, 100 ಅವರೇಜ್ನಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಾಣ ಮಾಡಿದ್ದೇನೆ. ನನ್ನ ಸಾಧನೆ ಏನೆಂದು ನಾನು ಹೇಳೋದಿಲ್ಲ. ನೀವೇ ಒಂದು ಬಾರಿ ಪರಿಶೀಲನೆ ಮಾಡಿ. ಯಾಕೆ ನನ್ನ ಕೈಬಿಟ್ಟಿದ್ದೀರಿ, ನನಗೆ ಕ್ಲ್ಯಾರಿಟಿ ಕೊಡಿ ಎಂದು ಆಗ್ರಹಿಸಿದ್ದಾರೆ.
2008ರಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಮನೋಜ್ ತಿವಾರಿ ಆಡಿದ್ದು ಕೇವಲ 12 ಏಕದಿ ಪಂದ್ಯಗಳನ್ನ ಮಾತ್ರ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಮನೋಜ್ ತಿವಾರಿ ಅನ್ಸೋಲ್ಡ್ ಆಟಗಾರನಾಗಿದ್ದರು.