ಹಿಸಾರ್(ಹರಿಯಾಣ):ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್ ರೌಂಡರ್ ಆಟಗಾರ ಯುವರಾಜ್ ಸಿಂಗ್ ಮೇಲೆ ಎಸ್‌ಸಿ - ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದೆ.
ಇನ್‌ಸ್ಟಾಗ್ರಾಮ್ ಲೈವ್ ವಿಡಿಯೋವೊಂದರಲ್ಲಿ ಟೀಮ್ ಇಂಡಿಯಾ ಬೌಲರ್ ಯುಜ್ವೇಂದ್ರ ಚಾಹಲ್ ಅವರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ 8 ತಿಂಗಳ ಹಿಂದೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ದೂರು ನೀಡಲಾಗಿತ್ತು. ದೂರು ನೀಡಿ ಎಂಟು ತಿಂಗಳ ಬಳಿಕ ಎಫ್‌ಐಆರ್ ದಾಖಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಿಸಾರ್ ಜಿಲ್ಲೆಯ ದಲಿತ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ. ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್ 3 (1) (ಆರ್) ಮತ್ತು 3 (1) (ಸೆಕ್ಷನ್) ಗಳನ್ನು ಹೊರತುಪಡಿಸಿ ಐಪಿಸಿಯ ಸೆಕ್ಷನ್ 153, 153 ಎ, 295, 505ರ ಅಡಿ (ಎಫ್‌ಐಆರ್) ದಾಖಲಾಗಿದೆ.
ಯುವರಾಜ್ ಸಿಂಗ್ ಯುಜ್ವೇಂದ್ರ ಚಾಹಲ್ ವಿರುದ್ಧ ಜಾತಿಗೆ ಸಂಬಂಧಿಸಿದ ಪದಗಳನ್ನು ಬಳಸಿದ್ದಾರೆ ಎನ್ನುವ ಆರೊಪ ಕೇಳಿಬಂದಿತ್ತು. ವಿಷಯ ಉಲ್ಬಣಗೊಂಡಾಗ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆ ಕೂಡಾ ಯಾಚಿಸಿದ್ದಾರೆ. ಇದೆಲ್ಲ ಘಟನೆ ಆದ ಬಳಿಕ ಇದೀಗ ಎಫ್‌ಐಆರ್ ದಾಖಲಾಗಿದೆ.