ಮುಂಬೈ :ವಿಶ್ವ ಕಂಡ ಶ್ರೇಷ್ಟ ಬ್ಯಾಟ್ಸ್ಮನ್, ತನ್ನಾಟದಿಂದಲೇ ಕ್ರಿಕೆಟ್ ದೇವರು ಎಂದು ಕರೆಸಿಕೊಂಡ ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 2003ರ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಆಟವನ್ನು ನೆನೆಸಿಕೊಂಡಿರುವ ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ನನ್ನ ಪ್ರಕಾರ 'ಸಚಿನ್ರ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ' ಅದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2003ರ ವಿಶ್ವಕಪ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 50 ಓವರ್ಗಳಲ್ಲಿ 270 ರನ್ಗಳಿಸಿತ್ತು. ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಗೆಲ್ಲಲು ಇಷ್ಟು ರನ್ ಸಾಕು ಎಂದುಕೊಂಡಿದ್ದ ಪಾಕಿಸ್ತಾನ ತಂಡದ ಕನಸನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ನುಚ್ಚುನೂರು ಮಾಡಿದ್ದರು.
ಕೇವಲ 75 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 98 ರನ್ಗಳಿಸಿದ್ದ ವೇಳೆ ಅಖ್ತರ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಭಾರತೀಯ ಬ್ಯಾಟ್ಸ್ಮನ್ಗಳಿಗೆ ಪಾಕಿಸ್ತಾನ್ ಬೌಲರ್ಗಳನ್ನು ಚೆಂಡಾಡುವ ಮಾರ್ಗವನ್ನು ತೋರಿಸಿದ್ದರು. ಕೊನೆಗೆ ಭಾರತ ತಂಡ ಕೇವಲ 45.4 ಓವರ್ಗಳಲ್ಲೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.