ರಾಜ್ಕೋಟ್:ಕೇವಲ 17 ವರ್ಷಕ್ಕೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ 9 ಬೆರಳುಗಳೊಂದಿಗೆ ಭಾರತ ತಂಡವನ್ನು ಪ್ರತಿನಿಧಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.
35 ವರ್ಷದ ಪಾರ್ಥೀವ್ ಪಟೇಲ್ 2003ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಧೋನಿ ಕೂಡ ಅದೇ ಸಮಯದಲ್ಲಿ ಕ್ರಿಕೆಟ್ ಪದಾರ್ಪಣೆ ಮಾಡಿ ವಿಕೆಟ್ ಕೀಪರ್ ಆಗಿ ಕಾಯಂ ಆಗಿದ್ದರಿಂದ ಪಾರ್ಥೀವ್ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.
ವಾಮನ ಮೂರ್ತಿಯಂತಿರುವ ಪಾರ್ಥೀವ್ ಕೈಯಲ್ಲಿ ಒಂದು ಕಿರುಬೆರಳಿಲ್ಲ. ಈ ವಿಚಾರವನ್ನುಇನ್ಸ್ಟಾಗ್ರಾಮ್ ಲೈವ್ ವೇಳೆ ಅವರೇ ಬಹಿರಂಗಗೊಳಿಸಿದ್ದಾರೆ. ತಾವು 6 ವರ್ಷದ ಮಗುವಾಗಿದ್ದಾಗ ಬಾಗಿಲ ಸಂದಿಗೆ ಸಿಲುಕಿ ಕಿರುಬೆರಳು ಕತ್ತರಿಸಿ ಹೋಗಿದೆ. ಸಧ್ಯಕ್ಕೆ 9 ಬೆರಳುಗಳನ್ನು ಹೊಂದಿರುವ ಪಾರ್ಥೀವ್ ಐಪಿಎಲ್ ಹಾಗೂ ರಣಜಿ ಕ್ರಿಕೆಟ್ ವೇಳೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವುದು ನಿಜಕ್ಕೂ ಆಶ್ಚರ್ಯವಾಗಿದೆ.
ವಿಕೆಟ್ ಕೀಪಿಂಗ್ ಮಾಡಲು ಗ್ಲೌಸ್ ತೊಡಬೇಕಿತ್ತು. ಆದರೆ 9 ಬೆರಳಿದ್ದಿದ್ದರಿಂದ ಅದು ಅಸಾಧ್ಯವಾಗಿತ್ತು. ಆದರೆ ಗ್ಲೌಸ್ನ ಕಿರುಬೆರಳಿನ ಜಾಗಕ್ಕೆ ಟೇಪ್ ಹಾಕಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ನನ್ನ ಎಲ್ಲಾ ಕೈ ಬೆರಳುಗಳು ಇದ್ದಿದ್ದರೆ ಹೇಗಿರುತ್ತಿತ್ತು ಎಂದು ನಾನು ಆನೇಕ ಬಾರಿ ಯೋಚಿಸಿದ್ದೇನೆ, ಆದರೂ 9 ಬೆರಳುಗಳಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದೇನೆ ಎಂದು ನೆನೆಸಿಕೊಂಡರೆ ಹೆಮ್ಮೆಯನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಪಾರ್ಥೀವ್ ಪಟೇಲ್ ಭಾರತದ ಪರ 25 ಟೆಸ್ಟ್, 38 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 934, ಏಕದಿನ ಟೂರ್ನಿಗಳಲ್ಲಿ 736 ರನ್ ಗಳಿಸಿದ್ದಾರೆ.