ಸೌತಾಂಪ್ಟನ್:ಇಂಗ್ಲೆಂಡ್ ವಿರುದ್ಧದ ಸರಣಿಗೆ 11 ವರ್ಷಗಳ ಸುದೀರ್ಘ ಕಾಲದ ನಂತರ ತಂಡಕ್ಕೆ ಆಯ್ಕೆಯಾಗಿರುವ ಫವಾದ್ ಆಲಮ್ ಅವರನ್ನು ಸೌತಾಂಪ್ಟನ್ ಟೆಸ್ಟ್ಗೆ 11ರ ಬಳಗದಲ್ಲಿ ಆಡಿಸಿದರೆ ಪಾಕಿಸ್ತಾನ ತಂಡಕ್ಕೆ ಅನುಕೂಲ ಎಂದು ಮಾಜಿ ನಾಯಕ ವಾಸೀಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 107 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದರೂ ಇಂಗ್ಲೆಂಡ್ ವಿರುದ್ಧ 3 ವಿಕೆಟ್ಗಳ ಸೋಲು ಕಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದ್ದರಿಂದ ಒಬ್ಬ ಹೆಚ್ಚುವರಿ ಬ್ಯಾಟ್ಸ್ಮನ್ ತಂಡದಲ್ಲಿರಬೇಕು. 11 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿರುವ ಫವಾದ್ ಆಲಮ್ಗೆ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.
'ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಗತ್ಯವಿದೆ. ಫವಾದ್ ಆಲಮ್ ಅದಕ್ಕೆ ಉತ್ತಮ ಆಯ್ಕೆ. ಅವರು ಎಡಗೈ ಬ್ಯಾಟ್ಸ್ಮನ್ ಆಗಿರುವುದರಿಂದ ಎಡ-ಬಲ ಸಂಯೋಜನೆ ಹೊಂದಬಹುದು. ಆಲಮ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 56 ಸರಾಸರಿ ಹೊಂದಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ನ ಪದಾರ್ಪಣೆ ಪಂದ್ಯದಲ್ಲೇ ಇವರು ಶತಕ ಸಿಡಿಸಿದ್ದರು. ಹಾಗಾಗಿ, ತಂಡ ಒಂದು ಅವಕಾಶ ಮಾಡಿಕೊಡಬೇಕು. ನಾನೇನಾದರೂ ನಾಯಕನಾಗಿದ್ದರೆ ತಂಡದ ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ' ಎಂದು ಪಾಕಿಸ್ತಾನ ಪರ ಗರಿಷ್ಠ ವಿಕೆಟ್ ಪಡೆದಿರುವ ಅಕ್ರಮ್ ಹೇಳಿದ್ದಾರೆ.