ಹೈದರಾಬಾದ್ :ಐಪಿಎಲ್ ಪಂದ್ಯದ ವೇಳೆ ಕೊಹ್ಲಿ ವೈಫಲ್ಯತೆ ವರ್ಣಿಸುವ ವೇಳೆ ಅನುಷ್ಕಾ ಹೆಸರನ್ನು ಎಳೆದು ತಂದು ವಿರಾಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಲೆಜೆಂಡ್ ಸುನೀಲ್ ಗವಾಸ್ಕರ್ ಅವರನ್ನು ಮಾಜಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಫಾರೂಖ್ ಎಂಜಿನಿಯರ್ ಸಮರ್ಥಿಸಿದ್ದಾರೆ.
ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ಕೊಹ್ಲಿ ತನ್ನ ಪತ್ನಿ ಅನುಷ್ಕಾರ ಬೌಲಿಂಗ್ಗೆ ಅಭ್ಯಾಸ ಮಾಡಿದ್ದಾರೆ. ಆದರೆ, ಇಲ್ಲಿ ಅದು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಭಾರತೀಯ ಅಭಿಮಾನಿಗಳು ಸುನೀಲ್ ಗವಾಸ್ಕರ್ ಅವರನ್ನು ಭಹಿಷ್ಕರಿಸಿ ಎಂದು ಟ್ವಿಟರ್ನಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಗವಾಸ್ಕರ್, ಕೊಹ್ಲಿ ಲಾಕ್ಡೌನ್ ವೇಳೆ ತಮ್ಮ ಮನೆಯ ಬಾಲ್ಕನಿಯಲ್ಲಿ ಕ್ರಿಕೆಟ್ ಆಡಿದ್ದ ವಿಡಿಯೋವನ್ನು ನಾನು ನೋಡಿದ್ದೆ, ಅದನ್ನು ಮಾತ್ರ ನಾನು ಹೇಳಿರುವೆ. ಇದರಲ್ಲಿ ಅಸಭ್ಯ ಹೇಳಿಕೆ ಏನೂ ಇಲ್ಲ ಎಂದು ಹೇಳಿ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು.
ಇದೀಗ ಗವಾಸ್ಕರ್ ಪರವಾಗಿ ನಿಂತಿರುವ ಅವರ ಸಮಕಾಲೀನ ಕ್ರಿಕೆಟಿಗ ಎಂಜಿನಿಯರ್, "ಭಾರತೀಯರಾದ ನಮಗೆ ಹಾಸ್ಯಪ್ರಜ್ಞೆ ಇಲ್ಲ, ಸುನಿಲ್, ವಿರಾಟ್-ಅನುಷ್ಕಾರ ಬಗ್ಗೆ ಹೀಗೆ ಹೇಳಿದ್ದರೆ, ಅದು ಕೇವಲ ಹಾಸ್ಯಮಯವಾಗಿರಬೇಕು. ಮತ್ತು ಅವರು ಕೆಟ್ಟ ಅಥವಾ ಅವಹೇಳನಕಾರಿಯ ಅಭಿರುಚಿ ಹೊಂದಿಲ್ಲ " ಎಂದು ಫಾರೂಖ್ ಹೇಳಿದ್ದಾರೆ.
ಸುನೀಲ್ ಗವಾಸ್ಕರ್ ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅವರು ಖಂಡಿತವಾಗಿಯೂ ತಮಾಷೆಯಾಗಿ ಹಾಗೆ ಹೇಳಿರುತ್ತಾರೆ. ಇನ್ನು ನನ್ನ ಪ್ರಕರಣದಲ್ಲೂ ಅನುಷ್ಕಾ ಹೇಳಿಕೆ ನೀಡಿದ ನಂತರ ಜನರು ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು ಎಂದು ಹೇಳಿದ್ದಾರೆ.
2019ರ ವಿಶ್ವಕಪ್ ವೇಳೆ ಆಯ್ಕೆ ಸಮಿತಿಯವರೆಲ್ಲರೂ ಅನುಷ್ಕಾಗೆ ಟೀ ಸರ್ವ್ ಮಾಡುತ್ತಿರೋದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ನಂತರ ಅನುಷ್ಕಾ "ನನ್ನ ಮೇಲಿನ ಸುಳ್ಳು ಸುದ್ದಿ ಹಾಗೂ ವರದಿಗಳ ವಿರುದ್ಧ ಯಾವಾಗಲೂ ಮೌನವಹಿಸುತ್ತೇನೆ. 11 ವರ್ಷಗಳಿಂದ್ಲೂ ಗೌರವಯುತವಾಗಿ ವೃತ್ತಿ ಜೀವನ ನಡೆಸುತ್ತಿದ್ದೇನೆ. ಇಂತಹ ಮಾತುಕತೆಗಳ ಸಂದರ್ಭದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಬೇಡಿ" ಎಂದು ಸುದೀರ್ಘ ಬರವಣಿಗೆಯ ಮೂಲಕ ಎಂಜಿನಿಯರ್ಗೆ ತಿರುಗೇಟು ನೀಡಿದ್ದರು.