ಮುಂಬೈ:ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ವೇಳೆ ಭಾರತ ಕ್ರಿಕೆಟ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ಜೊತೆ ಪತ್ನಿ ಅಥವಾ ಕುಟುಂಬದ ಸದಸ್ಯರನ್ನು ಕರೆತರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಿದೆ.
ಐಪಿಎಲ್ನಲ್ಲಿ ಬಯೋಬಬಲ್ಗೆ ಆಟಗಾರರ ಜೊತೆ ಪತ್ನಿಯರು ಇರುವುದಕ್ಕೆ ಬಿಸಿಸಿಐ ಅವಕಾಶ ನೀಡಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪದಿರುವುದರಿಂದ ಬೋರ್ಡ್ ಗೊಂದಲದಲ್ಲಿದೆ. ಇನ್ನು ಆಟಗಾರರು ಕೂಡ ಪ್ರವಾಸಕ್ಕೆ ತೆರಳದಿರಲು ಒಪ್ಪದಿದ್ದರೆ, ಮುಂದಿನ ಪ್ರವಾಸಕ್ಕೆ ಆಯ್ಕೆಯಾಗದಿರುವ ಭೀತಿ ಕೂಡ ಎದುರಾಗಿದೆ.
3 ಏಕದಿನ, 3 ಟಿ20 ಮತ್ತು 4 ಟೆಸ್ಟ್ ಪಂದ್ಯಗಳು ಈ ಪ್ರವಾಸದಲ್ಲಿ ನಡೆಯಲಿವೆ. ಈ ಎರಡೂವರೆ ತಿಂಗಳಷ್ಟು ದೀರ್ಘಕಾಲ ಎರಡು ತಂಡದ ಆಟಗಾರರು ಜೈವಿಕ ಸುರಕ್ಷಾ ವಲಯದಲ್ಲೇ ಇರಬೇಕಾಗಿದೆ. ಈಗಾಗಲೇ ತಂಡದ ಆಡಳಿತ ಮಂಡಳಿ ಸುದೀರ್ಘ ಪ್ರವಾಸವಾಗಿರುವುದರಿಂದ ತಂಡದ ಜೊತೆಗೆ ಕ್ರೀಡಾ ಮನಃಶಾಸ್ತ್ರಜ್ಞರು, ಯೋಗ ತರಬೇತುದಾರರ ವ್ಯವಸ್ಥೆ ಮಾಡಿಕೊಡಬೇಕೆಂದು ಬಿಸಿಸಿಐಗೆ ತಿಳಿಸಿದೆ.
ಇದಕ್ಕೆ ಬಿಸಿಸಿಐ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಆದರೆ ಆಟಗಾರರ ಕುಟುಂಬದ ವಿಷಯದಲ್ಲಿ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡ ಸಿಡ್ನಿಗೆ ತೆರಳಲಿದ್ದು, ಅಲ್ಲಿ 14 ದಿನಗಳು ಕ್ವಾರಂಟೈನ್ನಲ್ಲಿರಲಿದೆ.