ಹೈದರಾಬಾದ್ :ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ಗೆ ರೋಹಿತ್ ಶರ್ಮಾ ಆಯ್ಕೆಯಾಗುವ ಮೂಲಕ ಭಾರತ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಜೊತೆಗೆ ಇತ್ತೀಚಿನ ಭಾರತ ತಂಡದ ಟೆಸ್ಟ್ ಕ್ರಿಕೆಟ್ ಪ್ರದರ್ಶನ ನೋಡಿದ್ರೆ ಸಿಡ್ನಿಯಲ್ಲಿ ರಹಾನೆ ಬಳಗ ಮೇಲುಗೈ ಸಾಧಿಸಲಿದೆ ಎಂದು ಹಿಟ್ಮ್ಯಾನ್ ಬಾಲ್ಯದ ಕೋಚ್ ದಿನೇಶ್ ಲಾಡ್ ಅಭಿಪ್ರಾಯಪಟ್ಟಿದ್ದಾರೆ.
ಈಟಿವಿ ಭಾರತ ನಡೆಸಿದ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ಲಾಡ್ ಅವರು, ರೋಹಿತ್ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿನ ಪ್ರಗತಿ ಮತ್ತು ಅವರು ಆಸ್ಟ್ರೇಲಿಯಾದಲ್ಲಿ ಯಾವ ಬೌಲರ್ಗಳ ಎದುರು ಜಾಗೃತರಾಗಿರಬೇಕು ಎನ್ನುವುದರ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡವನ್ನು ನೀವು ಹೇಗೆ ಅಂದಾಜು ಮಾಡುತ್ತೀರಿ?
ಮೂರನೇ ಟೆಸ್ಟ್ ಬಗ್ಗೆ ನಾನು ಖಂಡಿತವಾಗಿಯೂ ಸಕಾರಾತ್ಮಕವಾಗಿದ್ದೇನೆ. ವಿಶೇಷವಾಗಿ ಮೊದಲ ಪಂದ್ಯದಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆದ ನಂತರ ಭಾರತ ಮರಳಿ ಬಂದ ರೀತಿ ಇದಕ್ಕೆ ಸಾಕ್ಷಿ. ಟೀಂ ಇಂಡಿಯಾ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಾದಂತಹ ಬ್ಯಾಟಿಂಗ್ ಬಲವುಳ್ಳ ತಂಡಕ್ಕೆ ಎರಡೂ ಇನ್ನಿಂಗ್ಸ್‌ಗಳಿಗೆ ಬೌಲಿಂಗ್ ಮಾಡುವುದು ಒಂದು ದೊಡ್ಡ ವಿಷಯ.
ಈಗ ರೋಹಿತ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಮೇಶ್ ಗಾಯಗೊಂಡಿದ್ದರೂ, ಸೈನಿ ಮತ್ತು ಶಾರ್ದುಲ್ ಅಂತಹ ಬೌಲರ್ಗಳು ನಮ್ಮ ತೆಕ್ಕೆಯಲ್ಲಿದ್ದಾರೆ. ನಾವು ಸರಿಯಾದ ಮನಸ್ಥಿತಿಯಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಆಸ್ಟ್ರೇಲಿಯಾ ತಂಡ ಸಾಕಷ್ಟು ಒತ್ತಡದಲ್ಲಿರಬೇಕು ಅನ್ನಿಸುತ್ತಿದೆ.
ಭಾರತ ತಂಡದಲ್ಲಿ ರೋಹಿತ್ರನ್ನು ಯಾವ ಕ್ರಮಾಂದಲ್ಲಿ ಕಾಣಲು ಇಚ್ಛಿಸುತ್ತೀರಿ?
ಅವರು ಆರಂಭಿಕ ಸ್ಥಾನದಲ್ಲೇ ಬ್ಯಾಟಿಂಗ್ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಟೀಂ ಮ್ಯಾನೇಜ್‌ಮೆಂಟ್ ಕೂಡ ಅದೇ ಮಾರ್ಗದಲ್ಲಿ ಯೋಚಿಸುತ್ತಿದೆ ಎಂದು ನನಗೆ ಖಾತ್ರಿಯಿದೆ. ಆರಂಭಿಕ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಹಲವು ಬಾರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾವು ಅವರನ್ನು ಆರಂಭಿಕ ಸ್ಥಾನದಲ್ಲಿರಿಸಬೇಕಾಗಿದೆ. ಮತ್ತೊಂದೆಡೆ, ಆ ಪಿಚ್‌ನಲ್ಲಿ ಶುಭಮನ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. 3ನೇ ಟೆಸ್ಟ್‌ನಲ್ಲಿ ರೋಹಿತ್ ಮಾಯಾಂಕ್ ಬದಲಿಗೆ ಸ್ಥಾನ ಪಡೆಯಲಿದ್ದಾರೆ ಎಂದು ನಾನು ಭಾವಿಸುತ್ತೇನೆ.
ರೋಹಿತ್ ಎಡಗೈ ವೇಗಿಗಳ ವಿರುದ್ಧ ಅಂತಹ ಇತಿಹಾಸ ಹೊಂದಿಲ್ಲ. ಹಾಗಾಗಿ ಮಿಚೆಲ್ ಸ್ಟಾರ್ಕ್ರಂತಹ ವೇಗಿಗಳ ವಿರುದ್ಧ ಏನಾದ್ರೂ ತಂತ್ರ ಹೊಂದಿದ್ದಾರೆಂದು ನೀವು ಭಾವಿಸುವಿರಾ?