ಹೈದರಾಬಾದ್:ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಸಹಾಯಕ ಕೋಚ್ ಮತ್ತು ಫ್ರಾಂಚೈಸ್ನ ಟ್ಯಾಲೆಂಟ್ ಸ್ಕೌಟ್ ಮುಖ್ಯಸ್ಥರಾಗಿರುವ ಪ್ರವೀಣ್ ಆಮ್ರೆ, ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರನ್ನು ತುಂಬಾ ಹತ್ತಿರದಿಂದ ನೋಡಿದವರಾಗಿದ್ದು, ಅವರನ್ನು ಮೂರು ಮಾದರಿಯಲ್ಲೂ ಆಡಬಲ್ಲ ಅತ್ಯುತ್ತಮ ಆಟಗಾರ ಎಂದು ಗುರುತಿಸಿದ್ದಾರೆ.
ಗುರುವಾರ ಸಿಡ್ನಿಯಲ್ಲಿ ಆರಂಭವಾಗಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಪಂತ್, ಇಂದೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಿಲ್ ಪುಕೋವ್ಸ್ಕಿ ಅವರ ಎರಡು ಕ್ಯಾಚ್ಗಳನ್ನು ಕೈಚೆಲ್ಲಿ ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಆದರೆ ಈಟಿವಿ ಭಾರತ ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಆಮ್ರೆ, ರಿಷಭ್ ಪಂತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರ ದಿನದಿಂದ ದಿನಕ್ಕೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಮತ್ತು ಎಲ್ಲಾ ಮಾದರಿಯಲ್ಲೂ ಆಡುವ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರಶ್ನೆ: 2ನೇ ಟೆಸ್ಟ್ನಲ್ಲಿ ಪಂತ್ ಪ್ರದರ್ಶನವನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ?
ಪಂತ್ ಆ ಪಂದ್ಯದಲ್ಲಿ ನಾಯಕ ರಹಾನೆಯವರೊಂದಿಗಿನ ಜೊತೆಯಾಟವನ್ನು ತುಂಬಾ ಆನಂದಿಸಿದ್ದಾರೆ. 29 ರನ್ಗಳಿಸಿದರೂ ಮಹತ್ವದ ಪಂದ್ಯದಲ್ಲಿ ಆ ಜೊತೆಯಾಟ ಮೌಲ್ಯಯುತವಾಗಿತ್ತು. ಇದು ಅವರಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರು ಎಂತಹ ಆಟಗಾರ ಎಂಬುದು ನಮಗೆ ತಿಳಿದಿದೆ. ಈ ಹಿಂದೆ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡಲು ಪಂತ್ ಸಂಪೂರ್ಣ ಸಾಮರ್ಥ್ಯ ಹೊಂದಿದ್ದಾರೆ.