ನವದೆಹಲಿ: ಇಂಗ್ಲೆಂಡ್ ತಂಡದ ರೊಟೇಶನ್ ಪದ್ದತಿಯನ್ನು ಸ್ವತಃ ಇಂಗ್ಲೆಂಡ್ ಮಾಜಿ ದಿಗ್ಗಜರೇ ಟೀಕಿಸುತ್ತಿರುವಾಗ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಇಂಗ್ಲೆಂಡ್ ತಂಡದ ಈ ನೀತಿ ನಿಧಾನವಾಗಿ ಅದ್ಭುತ ಕ್ರಿಕೆಟಿಗರ ಸೇನೆಯನ್ನು ಕಟ್ಟುತ್ತಿದೆ ಮತ್ತು ತಂಡವನ್ನು ಆಯ್ಕೆ ಮಾಡಲು ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇಂಗ್ಲೆಂಡ್ನ ರೊಟೇಶನ್ ಪದ್ದತಿ ನಿಧಾನವಾಗಿ ಅತ್ಯದ್ಭುತ ಕ್ರಿಕೆಟರ್ಗಳ ಸೇನೆಯನ್ನು ನಿರ್ಮಾಣ ಮಾಡುತ್ತಿದೆ. ನಾವು ಈಗ ಅದನ್ನು ಟೀಕಿಸಬಹುದು, ಆದರೆ ಮುಂದಿನ 8 ವರ್ಷಗಳಲ್ಲಿ 8 ಐಸಿಸಿ ಟೂರ್ನಮೆಂಟ್ಗಳಿವೆ. ಅವರಿಗೆ ಇದರಿಂದ ಅಂತಾರಾಷ್ಟ್ರೀಯ ಅನುಭವವುಳ್ಳ ಆಟಗಾರರ ಆಯ್ಕೆ ಮಾಡುವಾಗ ಯಾವುದೇ ಸಮಸ್ಯೆ ಇರುವುದಿಲ್ಲ." ಎಂದು ಡೇಲ್ ಸ್ಟೇನ್ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಮೈಕಲ್ ವಾನ್, ಕೆವಿನ್ ಪೀಟರ್ಸನ್ ಸೇರಿದಂತೆ ಕೆಲವು ಮಾಜಿ ಆಟಗಾರರು ಭಾರತದೆದುರು ಮೊದಲೆರಡು ತಂಡಗಳಿಂದ ಜಾನಿ ಬೈರ್ಸ್ಟೋವ್ ಅವರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಮೊದಲ ಟೆಸ್ಟ್ನ ನಂತರ ಆಲ್ರೌಂಡರ್ ಮೋಯಿನ್ ಅಲಿಗೂ ವಿಶ್ರಾಂತಿ ನೀಡಿ ತವರಿಗೆ ಕಳುಹಿಸಲಾಗಿತ್ತು. 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಸೋಲಿಗೆ ಇದೇ ಕಾರಣ ಎಂದು ಹಲವು ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದರು.
ಆದರೆ ಸ್ಟೇನ್ ಹಾಗೂ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ರೊಟೇಶನ್ ಪದ್ದತಿ ಇಂಗ್ಲೆಂಡ್ ತಂಡಕ್ಕೆ ಅನುಕೂಲಕರವಾಗಿದೆ ಎಂದು ಸಕಾರಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಇದೇ ನೀತಿಯನ್ನು ಭವಿಷ್ಯದಲ್ಲಿ ಹಲವಾರು ಕ್ರಿಕೆಟ್ ಬೋರ್ಡ್ಗಳು ಅನುಸರಿಸಬಹುದು ಎಂದು ತಿಳಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಅಹ್ಮದಾಬಾದ್ನಲ್ಲಿ ಫೆಬ್ರವರಿ 24 ರಂದು ನಡೆಯಲಿದೆ.