ಮ್ಯಾಂಚೆಸ್ಟರ್:ಬಯೋಸೆಕ್ಯೂರ್ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಪ್ರವಾಸಿ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಿಂದ ಹೊರಗಿಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಘೋಷಿಸಿದೆ.
ಇಂದಿನಿಂದ ಮ್ಯಾಂಚೆಸ್ಟರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಇಂದಿನಿಂದ ಆರಂಭಗೊಳ್ಳಲಿದೆ. ಕೋವಿಡ್ 19ರ ಭೀತಿ ಹಾಗೂ ಆಟಗಾರರ ಆರೋಗ್ಯ ದೃಷ್ಟಿಯಿಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೈವಿಕ ಸುರಕ್ಷತಾ ವಾತಾವರಣದಲ್ಲಿ ಪಂದ್ಯ ಆಯೋಜನೆ ಮಾಡಿದೆ. ಆದರೆ, ಜೋಫ್ರಾ ಆರ್ಚರ್ ಜೈವಿಕ ಸುರಕ್ಷತಾ ಪ್ರದೇಶದಿಂದ ಹೊರಹೋಗುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಇದರಿಂದ ಆರ್ಚರ್ 5 ದಿನಗಳ ಕಾಲ ಐಸೋಲೇಸನ್ನಲ್ಲಿ ಇರಬೇಕಾಗಿದೆ. ಈ ವೇಳೆ, 2 ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಿದೆ. ಅದರಲ್ಲಿ ನೆಗೆಟಿವ್ ವರದಿ ಬಂದರೆ ಮಾತ್ರ ಮತ್ತೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಇಸಿಬಿ ಪ್ರಕಟಣೆ ಹೊರಡಿಸಿದೆ.
ತಮ್ಮ ನಡೆಗೆ ಕ್ಷಮೆಯಾಚನೆ ಮಾಡಿರುವ ಆರ್ಚರ್, ತಮ್ಮಿಂದ ಇಡೀ ತಂಡ ಹಾಗೂ ಆಡಳಿತ ಮಂಡಳಿಯನ್ನ ಅಪಾಯಕ್ಕೆ ತಳ್ಳಿದ್ದೇನೆ. ನನ್ನಿಂದ ಎರಡು ತಂಡಗಳಿಗೆ ನಿರಾಶೆಯಾಗಿದೆ. ಇನ್ನು ನನ್ನ ತಪ್ಪಿಗೆ ಇಸಿಬಿ ನೀಡಿರುವ ಐಸೋಲೇಸನ್ ಶಿಕ್ಷೆಗೆ ನಾನು ಸಂಪೂರ್ಣ ಒಪ್ಪಿಕೊಂಡಿದ್ದೇನೆ. ಹಾಗೂ ಬಯೋಸೆಕ್ಯೂರ್ನಲ್ಲಿರುವ ಪ್ರತಿಯೊಬ್ಬರಲ್ಲೂ ನಾನು ಕ್ಷಮೆಯಾಚಿಸುತ್ತೇನೆ. ಹಾಗೂ ಟೆಸ್ಟ್ನಿಂದ ಹೊರಗುಳಿಯುತ್ತಿರುವುದಕ್ಕೆ ಬಹಳ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಇಸಿಬಿ ವರದಿಯಲ್ಲಿ ತಿಳಿದು ಬಂದಿದೆ.
ಮೊದಲ ಟೆಸ್ಟ್ನಲ್ಲಿ ಸೋಲುಕಂಡಿರುವ ಇಂಗ್ಲೆಂಡ್ ಸರಣಿ ಸಮಬಲ ಸಾಧಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದೀಗ ಮಂಚೂಣಿ ಬೌಲರ್ ಅನುಪಸ್ಥಿತಿ ಇಂದಿನ ಪಂದ್ಯದಲ್ಲಿ ಖಂಡಿತ ಕಾಡಲಿದೆ. ಇವರ ಬದಲಿಗೆ ಯಾವ ಆಟಗಾರ ಕಣಕ್ಕಿಳಿಯಲಿದ್ದಾರೆ ಎಂದು ಇನ್ನು ತಿಳಿದು ಬಂದಿಲ್ಲ.