ಗಾಲೆ : ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಸನಿಹ ಬಂದಿದೆ. ಕೇವಲ 74 ರನ್ಗಳ ಗುರಿ ಬೆನ್ನತ್ತಿರುವ ಪ್ರವಾಸಿ ತಂಡಕ್ಕೆ ಗೆಲ್ಲಲು ಕೇವಲ 36 ರನ್ಗಳ ಅವಶ್ಯಕತೆಯಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಲಂಕಾ ಕೇವಲ 135 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 421 ರನ್ ಗಳಿಸಿತ್ತು. ಇನ್ನು 286 ರನ್ಗಳ ಬೃಹತ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡ 4ನೇ ದಿನವರೆಗೆ ವೀರೋಚಿತ ಹೋರಾಟ ನಡೆಸಿ 359 ರನ್ಗಳಿಗೆ ಆಲೌಟ್ ಆಯಿತು.
ನಿನ್ನೆ 76 ರನ್ಗಳಿಸಿದ್ದ ಲಹಿರು ತಿರಿಮನ್ನೆ ಇಂದು 111 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಗೆ ಸಾಥ್ ನೀಡಿದ ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ 219 ಎಸೆತಗಳಲ್ಲಿ 71 ರನ್ಗಳಿಸಿ ಔಟಾದರು. ಇವರಿಬ್ಬರ ಸಾಹಸದಿಂದ ಶ್ರೀಲಂಕಾ ತಂಡ ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡಿತು.
ಜೊತೆಗೆ ಇಂಗ್ಲೆಂಡ್ಗೆ 74 ರನ್ಗಳ ಸಾಧಾರಣ ಟಾರ್ಗೆಟ್ ನೀಡಿ ಪಂದ್ಯವನ್ನು ಕೊನೆಯ ದಿನದವರೆಗೂ ವಿಸ್ತರಿಸಿತು. ಇಂಗ್ಲೆಂಡ್ ಪರ ಜಾಕ್ ಲೀಚ್ 5, ಡಾಮ್ ಬೆಸ್ 2 ಹಾಗೂ ಸ್ಯಾಮ್ ಕರನ್ 2 ವಿಕೆಟ್ ಪಡೆದರು.
74 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 14 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಜಾಕ್ ಕ್ರಾಲೆ (8), ಡೊಮೆನಿಕ್ ಸಿಬ್ಲೆ (2) ಸ್ಪಿನ್ನರ್ ಎಂಬುಲ್ಡೆನಿಯಾಗೆ ವಿಕೆಟ್ ಒಪ್ಪಿಸಿದ್ರೆ, ನಾಯಕ ಜೋ ರೂಟ್ ಕೇವಲ 1 ರನ್ಗಳಿಸಿ ರನ್ಔಟ್ ಆಗಿದ್ದಾರೆ.
ಆದರೆ, ಅನುಭವಿ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ತಾಳ್ಮೆ ಆಟವಾಡುತ್ತಿದ್ದು, ತಂಡವನ್ನು ಗೆಲುವಿನ ಗಡಿ ದಾಟಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು 37 ಎಸೆತಗಳನ್ನು ಎದುರಿಸಿದ್ದು, ಅಜೇಯ 11 ರನ್ಗಳಿಸಿದ್ದರೆ, ಡೇನಿಯಲ್ ಲಾರೆನ್ಸ್ 7 ರನ್ಗಳಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಇಂಗ್ಲೆಂಡ್ ತಂಡ ಪ್ರಸ್ತುತ 3 ವಿಕೆಟ್ ಕಳೆದುಕೊಂಡು 38 ರನ್ಗಳಿಸಿದ್ದು, ಕೊನೆಯ ದಿನ ಗೆಲುವು ಸಾಧಿಸಲು ಕೇವಲ 36 ರನ್ಗಳಿಸಬೇಕಿದೆ.