ಹೈದರಾಬಾದ್: ಪ್ರಪಂಚದಾದ್ಯಂತ ಕೋವಿಡ್-19 ಅಬ್ಬರ ಜೋರಾಗಿರುವ ಕಾರಣ ಎಲ್ಲ ರೀತಿಯ ಕ್ರೀಡೆ ಮುಂದೂಡಿಕೆ ಮಾಡಲಾಗಿದ್ದು, ಅದೇ ರೀತಿಯಾಗಿ ಕ್ರಿಕೆಟ್ ಪಂದ್ಯಗಳು ಕೂಡ ಮುಂದೂಡಿಕೆಯಾಗಿವೆ. ಇದೀಗ ಜುಲೈ ತಿಂಗಳಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಡೆಯುವುದು ಬಹುತೇಕ ಖಚಿತಗೊಂಡಿದೆ.
ಜುಲೈ 8ರಿಂದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿ ನಡೆಯಲಿದ್ದು, ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂರು ಟೆಸ್ಟ್ ಪಂದ್ಯಗಳು ಇಂಗ್ಲೆಂಡ್ನ ಹ್ಯಾಂಪ್ಶೈರ್ನ ಏಗಾಸ್ ಬೌಲ್ ಮತ್ತು ಲಂಕಾಷೈರ್ನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ನಲ್ಲಿ ನಡೆಯಲಿವೆ. ಬಯೋ ಸೆಕ್ಯೂರ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ಈ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್ಗೆ ಜೂನ್ 9ರಂದು ಪ್ರಯಾಣ ಬೆಳೆಸಲಿದ್ದು, ಈ ವೇಳೆ ಅಭ್ಯಾಸದ ಜತೆಗೆ ಅವರಿಗೆ ಕ್ವಾರಂಟೈನ್ ಸಹ ಮಾಡಲಾಗುವುದು ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿರುವ ಪ್ರಕಾರ ಮಹಿಳಾ ಕ್ರಿಕೆಟ್ ಪಂದ್ಯಗಳು ಕೂಡ ಆದಷ್ಟು ಬೇಗ ಆರಂಭಗೊಳ್ಳಲಿವೆ ಎಂದು ಹೇಳಿದೆ.