ಪುಣೆ: ಭಾರತ ವಿರುದ್ಧ ಇಂಗ್ಲೆಂಡ್ ತಂಡ ಮೂರನೇ ಏಕದಿನ ಪಂದ್ಯದಲ್ಲಿ 7 ರನ್‌ಗಳ ಸೋಲು ಅನುಭವಿಸಿತು. ಈ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಜೋಸ್ ಬಟ್ಲರ್, "ಭಾರತ ಸುಲಭವಾಗಿ ಗೆಲುವು ಪಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇಂಗ್ಲೆಂಡ್ ಯುವ ಆಲ್‌ರೌಂಡರ್ ಸ್ಯಾಮ್ ಕರ್ರನ್ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದರು" ಎಂದು ಗುಣಗಾನ ಮಾಡಿದ್ದಾರೆ.
330 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 168 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಅದ್ಭುತವಾಗಿ ಬ್ಯಾಟ್ ಮಾಡಿದ ಸ್ಯಾಮ್ ಕರ್ರನ್ 83 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿದರು.
"ಎರಡೂ ತಂಡಗಳು ಕೆಲ ತಪ್ಪುಗಳನ್ನು ಮಾಡಿದ ಹೊರತಾಗಿಯೂ ಪಂದ್ಯ ಅದ್ಭುತವಾಗಿ ನಡೆದಿದೆ. ಒಂದು ಹಂತದಲ್ಲಿ ಅಪಾಯಕ್ಕೆ ಸಿಲುಕಿದ್ದ ತಮಗೆ ಸ್ಯಾಮ್ ಕರ್ರನ್ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಸರಣಿ ಗೆದ್ದ ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸರಣಿಯಲ್ಲಿ ಸಾಕಷ್ಟು ಕಲಿತಿದ್ದೇವೆ" ಎಂದು ಹೇಳಿದರು.