ಲಾರ್ಡ್ಸ್(ಲಂಡನ್): ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಏಕದಿನ ಕ್ರಿಕೆಟ್ನಲ್ಲಿ ಈ ಹಿಂದೆ ಮೂರು ಬಾರಿ ಫೈನಲ್ಗೇರಿತ್ತಾದರೂ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರಲಿಲ್ಲ. ಇದೀಗ ನಾಲ್ಕನೇ ವಿಶ್ವಕಪ್ನಲ್ಲಿ ಮತ್ತೆ ಚಾಂಪಿಯನ್ ಪಟ್ಟದ ನಿರೀಕ್ಷೆಯಲ್ಲಿದ್ದು, ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದೆ.
1979 ರ ವಿಶ್ವಕಪ್:
1979ರ ಎರಡನೇ ವಿಶ್ವಕಪ್ನಲ್ಲೇ ಫೈನಲ್ಗೇರಿದ್ದ ಇಂಗ್ಲೆಂಡ್ ವಿಂಡೀಸ್ ವಿರುದ್ಧ 92 ರನ್ಗಳ ಸೋಲೊಪ್ಪಿಕೊಂಡಿತ್ತು. 286 ರನ್ಗಳ ಗುರಿ ಪಡೆದಿದ್ದ ಇಂಗ್ಲೆಂಡ್ 194 ರನ್ಗಳಿಗೆ ಆಲೌಟ್ ಆಗುವ ಮೂಲಕ ರನ್ನರ್ ಆಪ್ಗೆ ತೃಪ್ತಿಪಟ್ಟುಕೊಂಡಿತ್ತು.
1987ರ ವಿಶ್ವಕಪ್:
ನಂತರ 1987ರಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಮತ್ತೆ ಫೈನಲ್ ಪ್ರವೇಶಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 253 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 246 ರನ್ ಗಳಿಸಲಷ್ಟೇ ಶಕ್ತವಾಗಿ 7 ರನ್ಗಳ ಸೋಲನುಭವಿಸಿತ್ತು.
1992ರ ವಿಶ್ವಕಪ್
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಈ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಮರಳಿ ಫೈನಲ್ಗೇರಿತ್ತಾದರೂ ಅಲ್ಲಿಯೂ ಪಾಕಿಸ್ತಾನದ ವಿರುದ್ಧ 22 ರನ್ಗಳ ಸೋಲನುಭವಿಸಿ ಮೂರನೇ ಬಾರಿಗೆ ರನ್ನರ್ ಆಪ್ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 249 ರನ್ ಗಳಿಸಿತ್ತು. 250 ರನ್ಗಳನ್ನು ಬೆನ್ನತ್ತಿದ ಇಂಗ್ಲೆಂಡ್ 227 ರನ್ಗಳಿಗೆ ಆಲೌಟ್ ಆಗುವ ಮೂಲಕ 22 ರನ್ಗಳ ಸೋಲನುಭವಿಸಿತ್ತು.
ವಿಶ್ವಕ್ಕೆ ಕ್ರಿಕೆಟ್ ಪರಿಚಯಿಸಿಕೊಟ್ಟ ಇಂಗ್ಲೆಂಡ್ ತವರಿನ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದು, ಈ ಬಾರಿಯಾದರೂ ವಿಶ್ವಕಪ್ ಎತ್ತಿ ಹಿಡಿಯಲು ಕಾದುಕುಳಿತಿದೆ. ಲೀಗ್ನಲ್ಲಿ 9 ಪಂದ್ಯಗಳಲ್ಲಿ 3 ಸೋಲು ಹಾಗೂ 6 ಗೆಲುವು ಪಡೆದಿರುವ ಇಂಗ್ಲೆಂಡ್ ಮೂರನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿಯಲ್ಲಿ ಹಾಲಿ ಚಾಂಪಿಯನ್ನರನ್ನು ಹೀನಾಯವಾಗಿ ಸೋಲಿಸಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದು, ಫೈನಲ್ನಲ್ಲಿ ಕಿವೀಸ್ ಸವಾಲನ್ನು ಯಾವ ರೀತಿ ಎದುರಿಸಲಿದೆ ಎಂದು ಕಾದು ನೋಡಬೇಕಿದೆ.