ಮ್ಯಾಂಚೆಸ್ಟರ್: ಇಂಗ್ಲೆಂಡ್ ಬೌಲರ್ಗಳ ನಂಬಲಸಾಧ್ಯವಾದ ಬೌಲಿಂಗ್ ದಾಳಿಗೆ ನಾಟಕೀಯ ಕುಸಿತ ಕಂಡ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯದಲ್ಲಿ24 ರನ್ಗಳ ಸೋಲುಕಂಡಿದೆ. ಎರಡು ತಂಡಗಳು ತಲಾ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿವೆ.
232 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 207ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಐಸಿಸಿ ವಿಶ್ವಕಪ್ ಸೂಪರ್ ಲೀಗ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅಲ್ಲದೆ ಮೂರನೇ ಪಂದ್ಯವನ್ನು ರೋಚಕ ಹಂತಕ್ಕೆ ಕೊಂದೊಯ್ದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಆರಂಭಿಕರಾದ ಬೈರ್ಸ್ಟೋವ್ ಹಾಗೂ ಜೇಸನ್ ರಾಯ್ ಅವರನ್ನು ಬೇಗ ಕಳೆದುಕೊಂಡು ಆಘಾತ ಅನುಭವಿಸಿತು.
ಈ ಹಂತದಲ್ಲಿ ಒಂದಾದ ರೂಟ್ ಮತ್ತು ಮಾರ್ಗನ್ 3ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ರೂಟ್ 39 ಮತ್ತು ಮಾರ್ಗನ್(42) ಜಂಪಾಗೆ ವಿಕೆಟ್ ಒಪ್ಪಿಸಿದರರು. ನಂತರ ದಿಢೀರ್ ಕುಸಿತಕಂಡು 149 ಆಗುವಷ್ಟರಲ್ಲಿ 8 ವಿಕೆವ ಕಳೆದುಕೊಂಡಿತು. ಆದರೆ 9ನೇ ವಿಕೆಟ್ ಜೊತೆಯಾಟದಲ್ಲಿ ರಶೀದ್(35) ಮತ್ತು ಟಾಮ್ ಕರ್ರನ್(37) 76 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಢಿ ದಾಟಿಸಿದರು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 36 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಟಾರ್ಕ್ 38 ರನ್ ನೀಡಿ 2 ವಿಕೆಟ್ ಪಡೆದರು. ಹೇಜಲ್ ವುಡ್ ಒಂದು ವಿಕೆಟ್ ಪಡೆದರೂ ಕೇವಲ 27 ರನ್ ಬಿಟ್ಟುಕೊಟ್ಟರು. ಕಮ್ಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ತಲಾ ಒಂದು ವಿಕೆಟ್ ಪಡೆದರು.
ಇನ್ನು 232 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ವಾರ್ನರ್ ಮತ್ತು ಸ್ಟೋಯ್ನಿಸ್ ಪವರ್ ಪ್ಲೇ ಒಳಗೆ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದರು. ಆದರೆ ನಾಯಕ ಫಿಂಚ್ ಮತ್ತು ಲಾಬುಶೇನ್ 3ನೇ ವಿಕೆಟ್ಗೆ 107 ರನ್ ಸೇರಿಸಿ ಆಘಾತದಿಂದ ಪಾರು ಮಾಡಿದರು.
ಕೊನೆ 20 ಓವರ್ಗಳಲ್ಲಿ ಗೆಲುವಿಗೆ 89ರನ್ಗಳ ಅಗತ್ಯವಿತ್ತು. ಈ ವೇಳೆ 144ಕ್ಕೆ 2 ವಿಕೆಟ್ ಇದ್ದ ಆಸ್ಟೇಲಿಯಾ ನಾಟಕೀಯ ಕುಸಿತ ಕಂಡು 176 ರನ್ಗಳಾಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು. ಫಿಂಚ್105 ಎಸೆತಗಳಲ್ಲಿ 73 ರನ್ಗಳಿಸಿದರೆ, ಲಾಬುಶೇನ್ 48ಕ್ಕೆ ವಿಕೆಟ್ ಒಪ್ಪಿಸಿದರು.ನಂತರ ಬಂದ ಮಿಚೆಲ್ ಮಾರ್ಶ್(1), ಮ್ಯಾಕ್ಸ್ವೆಲ್(1),ಕಮ್ಮಿನ್ಸ್(11), ಸ್ಟಾರ್ಕ್(0) ಜಂಪಾ(2) ಇಂಗ್ಲೆಂಡ್ ವೇಗಿಗಳ ಮುಂದೆ ನಿಲ್ಲಲಾರದೆ ಹೋದರು.
ಕೊನೆಯ ವಿಕೆಟ್ಗೆ ಅಲೆಕ್ಸ್ ಕ್ಯಾರಿ(36) ಮತ್ತು ಹೇಜಲ್ವುಡ್(7) 31 ರನ್ ಸೇರಿಸಿದರಾದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು. ಕ್ಯಾರಿ ಔಟಾಗುವುದರೊಂದಿಗೆ ಆಸ್ಟ್ರೇಲಿಯಾ 207 ರನ್ಗಳಿಗೆ ಆಲೌಟ್ ಆಗುವ ಮೂಲಕ 24 ರನ್ಗಳ ಸೋಲುಕಂಡಿತು.
ಜೋಫ್ರಾ ಆರ್ಚರ್ 34ಕ್ಕೆ 3, ಕ್ರಿಸ್ ವೋಕ್ಸ್ 32ಕ್ಕೆ 3, ಸ್ಯಾಮ್ ಕರ್ರನ್35ಕ್ಕೆ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.