ಅಹಮದಾಬಾದ್:ಆತಿಥೇಯ ಭಾರತದ ವಿರುದ್ಧ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿರುವ ಭಾರತವು ಈ ಟೆಸ್ಟ್ ಗೆದ್ದು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪ್ರವೇಶಿಸುವ ಹಾದಿಯಲ್ಲಿದೆ.
ಈ ಟೆಸ್ಟ್ನಲ್ಲಿ ಡ್ರಾ ಸಾಧಿಸಿದರೂ ಭಾರತ ಲಾರ್ಡ್ಸ್ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಲಿದೆ.
ಇಂಗ್ಲೆಂಡ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವೇಗಿಗಳಾದ ಜೋಪ್ರಾ ಆರ್ಚರ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಡಾನ್ ಲಾರೆನ್ಸ್ ಹಾಗೂ ಡಾಮ್ ಬೆಸ್ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ವೇಗಿ ಬುಮ್ರಾ ಸ್ಥಾನದಲ್ಲಿ ಮೊಹಮದ್ ಸಿರಾಜ್ ಆಡಲಿದ್ದಾರೆ.