ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ರೂಟ್ ಜೊತೆಗೆ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಹಾಗೂ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗೆ ಜೋಡೆನ್ಲಿ, ಆ್ಯಂಡರ್ಸನ್ ಹಾಗೂ ಮಾರ್ಕ್ವುಡ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಸೌತಾಂಪ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿರುವ ಇಂಗ್ಲೆಂಡ್ ಸರಣಿಯಲ್ಲಿ ತಮ್ಮ ಸ್ಪರ್ಧೆ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಈ ಪಂದ್ಯಕ್ಕಾಗಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುತ್ತಿದೆ. ಆಶ್ಚರ್ಯ ಎಂದರೆ ಅನುಭವಿ ಆ್ಯಂಡರ್ಸನ್ ಅವರನ್ನು ತಂಡದಿಂದ ಕೈಬಿಟ್ಟು ಯುವ ಆಲ್ರೌಂಡರ್ ಸ್ಯಾಮ್ಕರನ್ಗೆ ಅವಕಾಶ ನೀಡಿದೆ.
ಇನ್ನು ಮೊದಲ ಟೆಸ್ಟ್ನಲ್ಲಿ ಕ್ರಮವಾಗಿ 18 ಮತ್ತು 29 ರನ್ಗಳಿಸಿದ್ದ ಜೋ ಡೆನ್ಲಿಯನ್ನು ತಂಡದಿಂದ ಕೈಬಿಡಲಾಗಿದೆ. ಇವರ ಸ್ಥಾನದಲ್ಲಿ ರೂಟ್ ಬ್ಯಾಟಿಂಗ್ ನಡೆಸಲಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಬ್ರಾಡ್ ಅವರನ್ನು ತಂಡದಿಂದ ಹೊರಗಿಟ್ಟು ಟೀಕೆಗೆ ಗುರಿಯಾಗಿದ್ದ ಆಡಳಿತ ಮಂಡಳಿ ಮತ್ತೆ ಬ್ರಾಡ್ರನ್ನ 11ರ ಬಳಗದಲ್ಲಿ ಸೇರಿಸಿಕೊಂಡಿದೆ. ಆದರೆ, ಅವರ ಜೊತೆಗಾರ ಜಿಮ್ಮಿ ಆ್ಯಂಡರ್ಸನ್ ಅವರನ್ನು ಡ್ರಾಪ್ ಮಾಡಿದೆ. ಮತ್ತೊಬ್ಬ ವೇಗಿ ಮಾರ್ಕ್ವುಡ್ ಬದಲಿಗೆ ಯುವ ಆಲ್ರೌಂಡರ್ ಸ್ಯಾಮ್ ಕರನ್ ಕಣಕ್ಕಿಳಿಯುತ್ತಿದ್ದಾರೆ ಎಂದು ಇಸಿಬಿ ಪ್ರಕಟಣೆಯಿಂದ ತಿಳಿದುಬಂದಿದೆ.