ಮ್ಯಾಂಚೆಸ್ಟರ್ :ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ ಯುವ ಪಾಕಿಸ್ತಾನ ತಂಡದ ವಿರುದ್ಧವೂ ತಮ್ಮ ಸ್ಥಿರ ಪ್ರದರ್ಶನ ನೀಡಲು ಸಜ್ಜಾಗಿದೆ. ಬುಧವಾರದಿಂದ ಉಭಯ ತಂಡಗಳ ಮಧ್ಯೆ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಶುರುವಾಗಲಿದೆ.
ಪ್ರವಾಸಿ ಪಾಕಿಸ್ತಾನ ತಂಡ ಕೊರೊನಾದಿಂದ ಉಂಟಾಗಿದ್ದ ಸುದೀರ್ಘ ವಿಶ್ರಾಂತಿಯ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿದೆ. ಆದರೆ, ಆತಿಥೇಯ ಇಂಗ್ಲೆಂಡ್ ಈಗಾಗಲೇ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ. ಈ ಸರಣಿ ಗೆದ್ದರೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಪಾಕಿಸ್ತಾನ ತಂಡಕ್ಕೂ ನ್ಯೂಜಿಲ್ಯಾಂಡ್ ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಅವಕಾಶವಿದೆ.
ಈ ಸರಣಿಯಲ್ಲಿ ಇಂಗ್ಲೆಂಡ್ ವಿಸ್ಡನ್ ಟ್ರೋಫಿ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಮೊದಲ ಪಂದ್ಯದಲ್ಲಿ ಆಂಗ್ಲರ ಬೌಲಿಂಗ್ ಕಾಂಬಿನೇಷನ್ ಹೇಗಿರಲಿದೆ ಎಂಬುದು ಕುತೂಹಲಕಾರಿ ವಿಚಾರ. ಇಂಗ್ಲೆಂಡ್ ಟೀಂನ ಸೂಪರ್ ಜೋಡಿ ಆ್ಯಂಡರ್ಸನ್-ಬ್ರಾಡ್ ಕಳೆದ ಸರಣಿಯಲ್ಲಿ ಒಮ್ಮೆಯೂ ಆಡಿರಲಿಲ್ಲ. ಈ ಸರಣಿಯಲ್ಲಾದರೂ ಒಂದಾಗಲಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಪ್ರವಾಸಿ ತಂಡ ಆಂಗ್ಲರ ನಾಡಿನಲ್ಲಿ ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡದಿದ್ದರೂ ಒಂದು ತಿಂಗಳ ಮುಂಚೆಯೇ ಆಗಮಿಸಿರುವುದರಿಂದ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಕೋಚ್ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.
ಸುದೀರ್ಘ ವಿರಾಮದ ಬಳಿಕ ಕ್ರಿಕೆಟ್ಗೆ ಮರಳುತ್ತಿರುವಾಗ ಸ್ವಲ್ಪಮಟ್ಟಿನ ಒತ್ತಡ ಇದ್ದೇ ಇರುತ್ತದೆ. ಆದರೆ, ನಮ್ಮ ಆಟಗಾರರು ಮೈದಾನಕ್ಕೆ ಕಾಲಿಡಲು ಕಾಯುತ್ತಿದ್ದಾರೆ. ಎಲ್ಲರೂ ತಾಜಾ ಹಾಗೂ ಉತ್ಸಾಹದಿಂದಿದ್ದಾರೆ ಅನ್ನೋದು ಅವರ ಮಾತು.
ತಂಡದಲ್ಲಿ ಯುವ ವೇಗಿಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಅವರಿಂದ ಬೌಲರ್ ಸ್ನೇಹಿ ಪಿಚ್ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ಇಬ್ಬರು ಸ್ಪಿನ್ ಬೌಲರ್ಗಳೊಂದಿಗೆ ಆಡಲು ಪಾಕಿಸ್ತಾನ ಬಯಸಿದೆ.