ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬಾವುಕರಾಗಿದ್ದಾರೆ.
ತಂದೆಯ ಸಾವಿನ ಸುದ್ದಿ ತಿಳಿದರೂ ಅವರ ಕನಸನ್ನು ಸಾಕಾರಗೊಳಿಸಲು ಅಂತ್ಯಸಂಸ್ಕಾರಕ್ಕೂ ತೆರಳದೇ, ಆಸೀಸ್ ನೆಲದಲ್ಲೇ ಉಳಿದ ಸಿರಾಜ್, ಮೆಲ್ಬೋರ್ನ್ ಪಂದ್ಯದಲ್ಲಿ ಪದಾರ್ಪಣೆ ಮಾಡಿ ತಂದೆಯ ಕನಸು ನನಸು ಮಾಡಿದ್ದರು. ಸಿರಾಜ್, ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ರು.
ತೃತೀಯ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಸಿರಾಜ್ ಭಾವುಕರಾಗಿದ್ದು, ಆನಂದ ಬಾಷ್ಪ ಸುರಿಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಸಿರಾಜ್ ಬೆನ್ನುತ್ತಟ್ಟಿ ಸಂತೈಸುತ್ತಿದ್ದಾರೆ.
ಸಿಡ್ನಿ ಪಂದ್ಯದಲ್ಲಿ ಆಸೀಸ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿರುವ ಹೈದರಾಬಾದ್ ವೇಗಿ, ಅಪಾಯಕಾರಿ ಆಟಗಾರ ಡೇವಿಡ್ ವಾರ್ನರ್ ಅವರನ್ನು ಪೆವಿಲಿಯನ್ ಸೇರಿಸಿದ್ದಾರೆ. ಮಳೆಯಿಂದ ಪಂದ್ಯವನ್ನು ಸ್ಥಗಿತಗೊಳಿಸಿದ್ದು, 7.1 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡ ಒಂದು ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದೆ.