ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಆಸೀಸ್ ತಂಡದ ನಾಯಕಿ ಲ್ಯಾನಿಂಗ್ 133 ರನ್ಗಳಿಸಿ ಟಿ20 ಕ್ರಿಕೆಟ್ನ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿದ್ದರು. ಇದೀಗ ಆಲ್ರೌಂಡರ್ ಎಲಿಸ್ಸಾ ಪೆರ್ರಿ ಟಿ20 ಕ್ರಿಕೆಟ್ನಲ್ಲೇ 1000 ರನ್ ಹಾಗೂ 100 ವಿಕೆಟ್ ಪಡೆದ ವಿಶ್ವದ ಮೊದಲ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ದಾಖಲೆಯನ್ನು ಈವರೆಗೂ ಯಾವುದೇ ಪುರುಷ ಕ್ರಿಕೆಟರ್ರಿಂದಲೂ ದಾಖಲಾಗಿಲ್ಲ.
ಇಂಗ್ಲೆಂಡ್ ವಿರುದ್ಧ 47 ರನ್ಗಳಿಸಿದ ಪೆರ್ರಿ ಟಿ20 ಕ್ರಿಕೆಟ್ನಲ್ಲಿ 1000 ರನ್ ಪೂರ್ಣಗೊಳಿಸಿದರು. ಪೆರ್ರಿ 2018ರ ನವೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧವೇ ನೇಟ್ ಸ್ಕೀವರ್ ವಿಕೆಟ್ ಪಡೆದು 100 ವಿಕೆಟ್ ಮೈಲಿಗಲ್ಲು ತಲುಪಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧವೇ 1000 ರನ್ ಪೂರೈಸಿ ಈ ಎರಡು ದಾಖಲೆ ಮಾಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಎಲಿಸ್ಸಾ ಪೆರ್ರಿ ಹೊರೆತು ಪಡಿಸಿದರೆ ಪಾಕಿಸ್ತಾನದ ಆಫ್ರಿದಿ 1416 ರನ್ ಹಾಗೂ 98 ವಿಕೆಟ್ ಪಡೆದಿದ್ದಾರೆ. ಇನ್ನು ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಕೂಡ 1471 ರನ್ ಹಾಗೂ 88 ವಿಕೆಟ್ ಪಡೆದಿದ್ದಾರೆ.