ಲಂಡನ್: ಸೆಪ್ಟೆಂಬರ್ನಲ್ಲಿ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ 5 ಪಂದ್ಯಗಳ ಟಿ-20 ಸರಣಿಗೆ ಇಂಗ್ಲೆಂಡ್ ಮಹಿಳಾ ತಂಡ ಆತಿಥ್ಯ ವಹಿಸಲಿದೆ. ಈ ವಿಚಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಗಳವಾರ ತಿಳಿಸಿದೆ.
ಎಲ್ಲಾ 5 ಪಂದ್ಯಗಳು ಸೆಪ್ಟೆಂಬರ್ನಲ್ಲಿ ಡರ್ಬಿಯ ಇಂಕೋರ ಕೌಂಟಿ ಗ್ರೌಂಡ್ನಲ್ಲಿ ನಡೆಯಲಿವೆ. ಜೊತೆಗೆ ಈ ಪಂದ್ಯಗಳು ಬಯೋ ಸೆಕ್ಯೂರ್ ವಲಯದಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ.
ಕೋವಿಡ್-19 ಕಾರಣದಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇಂಗ್ಲೆಂಡ್ಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಸರಣಿ ಬದಲಾಗಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಆಯೋಜನೆ ಮಾಡಲಾಗುತ್ತಿದೆ.
ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 21ರಂದು ನಡೆಯಲಿದೆ. ಹಾಗೂ ಕೊನೆಯ ಪಂದ್ಯ ಸೆಪ್ಟೆಂಬರ್ 30ರಂದು ನಡೆಯಲಿದೆ.
ಮಾರ್ಚ್ನಲ್ಲಿ ಕೋವಿಡ್-19 ರೋಗದ ಆರಂಭದಲ್ಲಿ ಮಹಿಳಾ ಕ್ರಿಕೆಟ್ ಆವೇಗವನ್ನು ರಕ್ಷಿಸುವುದು ನಮ್ಮ ನಾಲ್ಕು ಹೇಳಿಕೆಗಳಲ್ಲಿ ಒಂದಾಗಿತ್ತು. ಇದೀಗ ಬೇಸಿಗೆಯಲ್ಲಿ ಕೋವಿಡ್-19ನ ಸಮಸ್ಯೆಯ ನಡುವೆಯೂ ಇಂಗ್ಲೆಂಡ್ ಮಹಿಳೆಯರು ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಲು ಬಹಳ ಖುಷಿಯಾಗುತ್ತಿದೆ ಎಂದು ಇಸಿಬಿ ಸಿಇಒ ಟಾಮ್ ಹ್ಯಾರಿಸನ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪುರುಷರ ತಂಡ ಯಶಸ್ವಿಯಾಗಿ ಟೆಸ್ಟ್ ಸರಣಿ ಮುಗಿಸಿರುವ ಹಿನ್ನೆಲೆ ಮಹಿಳಾ ತಂಡಗಳಿಗೂ ಅದೇ ರೀತಿಯ ಬಯೋ ಸೆಕ್ಯೂರ್ ವಲಯಗಳನ್ನು ನಿರ್ಮಿಸಿ ಟೂರ್ನಿ ಆಯೋಜಿಸಲಾಗುವುದು. ನಮ್ಮ ಈ ಮಹಾತ್ವಾಕಾಂಕ್ಷೆಯನ್ನು ಬೆಂಬಲಿಸಿದ ಡರ್ಬಿ ಕ್ರಿಕೆಟ್ ಬೋರ್ಡ್ಗೆ ನಾವು ಅಪಾರ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.