ನವದೆಹಲಿ:ವೆಸ್ಟ್ ಇಂಡೀಸ್ ತಂಡದ ಹಿರಿಯ ಆಲ್ರೌಂಡರ್ ಡ್ವೇನ್ ಬ್ರಾವೋ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ತಮ್ಮ ನಿವೃತ್ತಿ ವಾಪಸ್ ಪಡೆದಿದ್ದ ಬ್ರಾವೋ ಟಿ20 ವಿಶ್ವಕಪ್ನಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. 2016ರಲ್ಲಿ ಕೊನೆಯ ಬಾರಿ ಟಿ20 ಆಡಿದ್ದ ಬ್ರಾವೊ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಇದೀಗ 3 ವರ್ಷಗಳ ನಂತರ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ.
ತಂಡದ ಡೆತ್ ಬೌಲಿಂಗ್‌ನ ಬಲಿಷ್ಠಗೊಳಿಸಲು ಬ್ರಾವೋರನ್ನು ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿದೆ. ಅವರ ದಾಖಲೆಗಳೇ ಅವರೊಬ್ಬ ಡೆತ್ ಬೌಲರ್ ಸ್ಪೆಷಲಿಸ್ಟ್ ಎಂದು ತೋರಿಸುತ್ತವೆ. ಅಲ್ಲದೆ ಅವರು ತಂಡದ ಯುವ ಬೌಲರ್ಗಳಿಗೆ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿಂಡೀಸ್ ಆಯ್ಕೆ ಸಮಿತಿ ತಿಳಿಸಿದೆ. ಇತ್ತೀಚೆಗೆ ಕೀರನ್ ಪೊಲಾರ್ಡ್ ಕೂಡ ತಂಡಕ್ಕೆ ವಾಪಸ್ ಮರಳಿದ್ದರು. ಅವರನ್ನು ವಿಂಡೀಸ್ ಕ್ರಿಕೆಟ್ ಮಂಡಳಿ ಸೀಮಿತ ಓವರ್ಗಳ ನಾಯಕನನ್ನಾಗಿ ನೇಮಿಸಿತ್ತು.
36 ವರ್ಷದ ಬ್ರಾವೋ ವೆಸ್ಟ್ ಇಂಡೀಸ್ ತಂಡದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದು, 2200 ರನ್ ಹಾಗೂ 86 ವಿಕೆಟ್, 164 ಏಕದಿನ ಪಂದ್ಯಗಳಿಂದ 2968 ರನ್ ಹಾಗೂ 199 ವಿಕೆಟ್ 66 ಟಿ20 ಪಂದ್ಯಗಳಿಂದ 1142 ರನ್ ಹಾಗೂ 52 ವಿಕೆಟ್ ಪಡೆದಿದ್ದಾರೆ.