ಪೋರ್ಟ್ ಆಫ್ ಸ್ಪೇನ್:ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ಮತ್ತು ಸೇಂಟ್ ಲೂಸಿಯಾ ಜೌಕ್ಸ್ ನಡುವಿನ ಪಂದ್ಯದಲ್ಲಿ ಬ್ರಾವೋ ಈ ಮೈಲುಗಲ್ಲು ತಲುಪಿದ್ದಾರೆ.
ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಆಟಗಾರ ಬ್ರಾವೋ, ರಾಹ್ಕೀಮ್ ಕಾರ್ನ್‌ವಾಲ್ (18) ಅವರನ್ನು ಔಟ್ ಮಾಡುವ ಮೂಲಕ 500ನೇ ವಿಕೆಟ್ ಪಡೆದಿದ್ದಾರೆ. ವಿಂಡೀಸ್ ಆಲ್ರೌಂಡರ್ ತಮ್ಮ 459ನೇ ಪಂದ್ಯದಲ್ಲಿ 500ನೇ ವಿಕೆಟ್ ಕಬಳಿಸಿದ್ದು, ಅತಿ ಕಡಿಮೆ ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದಾರೆ. 24.62ರ ಸರಾಸರಿ ಮತ್ತು 8.25 ರನ್ರೇಟ್ನಲ್ಲಿ ಇಷ್ಟೊಂದು ಬಲಿ ಪಡೆದಿದ್ದಾರೆ.
ಬ್ರಾವೋ ಟಿ-20 ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ಹಾಗೂ ವಿಶ್ವದ ಹಲವೆಡೆ ವಿವಿಧ ಲೀಗ್ಗಳಲ್ಲಿ ಹಲವಾರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ವೆಸ್ಟ್ ಇಂಡೀಸ್, ಚೆನ್ನೈ ಸೂಪರ್ ಕಿಂಗ್ಸ್, ಚಿತ್ತಗಾಂಗ್ ಕಿಂಗ್ಸ್, ಕೊಮಿಲ್ಲಾ ವಿಕ್ಟೋರಿಯನ್ಸ್, ಕಾಕಾ ಡೈನಮೈಟ್ಸ್, ಡಾಲ್ಫಿನ್ಸ್, ಎಸೆಕ್ಸ್, ಗುಜರಾತ್ ಲಯನ್ಸ್, ಕೆಂಟ್, ಲಾಹೋರ್ ಖಲಂಡಾರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಮೆಲ್ಬೋರ್ನ್ ಸ್ಟಾರ್ಸ್, ಮಿಡಲ್ಸೆಕ್ಸ್, ಮುಂಬೈ ಇಂಡಿಯನ್ಸ್, ಪಾರ್ಲ್ ರಾಕ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್, ಸರ್ರೆ, ಸಿಡ್ನಿ ಸಿಕ್ಸರ್ಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಟ್ರಿನಿಡಾಡ್ ಮತ್ತು ಟೊಬಾಗೊ ರೆಡ್ ಸ್ಟೀಲ್ ಮತ್ತು ವಿಕ್ಟೋರಿಯಾ ತಂಡಗಳ ಪರ ಆಡಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಲಸಿತ್ ಮಾಲಿಂಗ, 339 ಪಂದ್ಯಗಳಿಂದ 389 ವಿಕೆಟ್ ಕಿತ್ತಿದ್ದಾರೆ. ಇನ್ನುಳಿದಂತೆ ಮತ್ತೋರ್ವ ಕೆರಿಬಿಯನ್ ಬೌಲರ್ ಸುನೀಲ್ ನರೇನ್ 383, ದ. ಆಫ್ರಿಕಾದ ಇಮ್ರಾನ್ ತಾಹಿರ್ 374, ಮತ್ತು ಪಾಕಿಸ್ತಾನದ ಸೊಹೈಲ್ ತನ್ವೀರ್ 356 ವಿಕೆಟ್ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.