ತಿರುವನಂತಪುರಂ: 50 ವರ್ಷದ ಕೇರಳದ ಅನಂತ ಕೆಎನ್ ಅನಂತಪದ್ಮನಾಭನ್ ಐಸಿಸಿ ಅಂಪೈರ್ಗಳ ಸಮಿತಿಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಭಾರತದ ಅಂಪೈರ್ ನಿತಿನ್ ಮೆನನ್ ಕೂಡ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಬಡ್ತಿ ಪಡೆದಿದ್ದರು. ಇದೀಗ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಂತೋಷಗೊಂಡಿರುವ ಅವರು ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದೆ. ನಾನು ಆ ಹುದ್ದೆಯನ್ನು ಪಡೆಯುವನೆಂಬ ಭರವಸೆಯಿತ್ತು. ಈ ಸುದ್ದಿಯಿಂದ ತುಂಬಾ ಖುಷಿಯಾಗಿದೆ. ನಾನು ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಿದ್ದೆ. ಆದರೆ ಅನಿಲ್ ಕುಂಬ್ಳೆ ಅದ್ಭುತ ಯಶಸ್ಸಿನ ಶಿಖರದಲ್ಲಿದ್ದರಿಂದ ನನಗೆ ಆ ಸಂದರ್ಭದಲ್ಲಿ ಅವಕಾಶ ಸಿಗಲಿಲ್ಲ. ಇಬ್ಬರು ಸಮಕಾಲೀನರಾಗಿದ್ದರಿಂದ ನಾನು ದೇಶಕ್ಕಾಗಿ ಆಡಲು ವಿಫಲನಾಗಿದ್ದೆ ಎಂದು ಕೇರಳದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.
ಐಪಿಎಲ್ , ಜೂನಿಯರ್ ವಿಶ್ವಕಪ್, ರಣಜಿ ಕ್ರಿಕೆಟ್ನಲ್ಲಿ ಅಂಪೈರ್ ಅನುಭವ ಹೊಂದಿರುವ ಅನಂತ ಪದ್ಮನಾಭನ್ ಕೇರಳ ಪರ 105 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 1998ರಿಂದ 2003-04ರವರೆಗೂ ಅವರು ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಅವರು ಭಾರತ ಎ ತಂಡದ ಪರವಾಗಿ ಸ್ಟಿವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧವೂ 1998ರಲ್ಲಿ ಆಡಿದ್ದರು.
ಐಸಿಸಿಯಲ್ಲಿ ಭಾರತದ ಶ್ರೀನಿವಾಸ್ ವೆಂಕಟರಾಘವನ್, ಸುಂದರಮ್ ರವಿ, ಅನಿಲ್ ಚೌದರಿ, ಶಂಶುದ್ದೀನ್, ವಿನೀತ್ ಕುಲಕರ್ಣಿ, ಶವಿರ್ ತಾರಾಪೊರೆ,ಅಮೀಶ್ ಸಾಹೇಬ್ ಹಾಗೂ ಶಂಕರ್ ರಾಣಾ ಕಾರ್ಯ ನಿರ್ವಹಿಸಿದ್ದಾರೆ