ಲಾಹೋರ್: ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಕನ್ನಡಿಗ ರಾಹುಲ್ ದ್ರಾವಿಡ್ ಒಬ್ಬ ಕಠಿಣ ಹಾಗೂ ದೃಢನಂಬಿಕೆಯುಳ್ಳ ಬ್ಯಾಟ್ಸ್ಮನ್ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಹೇಳಿದ್ದಾರೆ.
ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ವಿಶ್ವದ ದಿಗ್ಗಜ ಬ್ಯಾಟ್ಸ್ಮನ್ಗಳನ್ನೇ ಬೆಚ್ಚಿ ಬೀಳಿಸುತ್ತಿದ್ದ ಶೋಯಬ್ ಅಖ್ತರ್, ದ್ರಾವಿಡ್ ವಿರುದ್ಧ ಮುಖಾಮುಖಿಯಾದಾಗ ಇಬ್ಬರಿಗೂ ಒಬ್ಬರನ್ನೊಬ್ಬರು ಎದುರಿಸಲು ಕಠಿಣವಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ದ್ರಾವಿಡ್ ಒಬ್ಬ ಕಠಿಣ ಮತ್ತು ದೃಢನಂಬಿಕೆಯುಳ್ಳ ಬ್ಯಾಟ್ಸ್ಮನ್. ನನ್ನನ್ನು ಎದುರಿಸಲು ಅವರಿಗೆ ಹೇಗೆ ಕಠಿಣವಾಗುತ್ತಿತ್ತೋ ಅದೇ ರೀತಿ ಅವರಿಗೆ ಬೌಲಿಂಗ್ ಮಾಡುವುದು ನನಗೆ ಸವಾಲಿನ ಕೆಲಸವಾಗಿತ್ತು. ಅವರು ನನ್ನ ಬೌಲಿಂಗ್ಗೆ ಸ್ವಲ್ಪ ಸುಲಭವಾಗಿ ಬ್ಯಾಟಿಂಗ್ ಮಾಡುತ್ತಿದ್ದರು" ಎಂದು ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್ ಆಕಾಶ್ವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾವೂ ಕ್ಲಬ್ ಲೆವೆಲ್ನಲ್ಲಿ ತರಬೇತಿ ಪಡೆದ ಬಗ್ಗೆ ಮಾತನಾಡಿರುವ ಅವರು, ಒಬ್ಬ ಬ್ಯಾಟ್ಸ್ಮನ್ ದ್ರಾವಿಡ್ ರೀತಿ ಆಡುತ್ತಿದ್ದರೆ, ನಾವು ಅವರಿಗೆ ಹೆಚ್ಚು ಲೆಂಗ್ತ್ ಬಾಲ್ಗಳನ್ನು ಮಾಡಬೇಕು. ಸ್ಟಂಪ್ಗೆ ಹೆಚ್ಚು ಹತ್ತಿರವಾಗಿ ಬ್ಯಾಟ್ ಮತ್ತು ಪ್ಯಾಡ್ ಮಧ್ಯದಲ್ಲಿ ಗುರಿಯಿಟ್ಟು, ಪ್ಯಾಡ್ಗೆ ಬಡಿಯುವಂತೆ ಬೌಲ್ ಮಾಡಬೇಕು ಎಂದು ತಮ್ಮ ಆರಂಭದ ದಿನಗಳಲ್ಲಿ ಬೌಲಿಂಗ್ನಲ್ಲಿ ಅಭಿವೃದ್ಧಿ ಹೊಂದಿದ ಬಗ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಪಂದ್ಯವೊಂದರಲ್ಲಿ ದ್ರಾವಿಡ್ರನ್ನು ಎಲ್ಬಿಡಬ್ಲ್ಯೂ ಮಾಡಿದ್ದೆ, ಆದರೆ ಅಂಪೈರ್ ಪಾಕಿಸ್ತಾನದ ಪರ ತೀರ್ಪು ನೀಡಲಿಲ್ಲ. ಆದರೂ ನಾವು ಪಂದ್ಯವನ್ನು ಗೆದ್ದುಕೊಂಡೆವು ಎಂದು ಅಖ್ತರ್ ತಿಳಿಸಿದ್ದಾರೆ.