ಲಾರ್ಡ್ಸ್: ನಾಟ್ವೆಸ್ಟ್ ಸರಣಿ ಗೆಲ್ಲಲು ದ್ರಾವಿಡ್ ಸರ್ ಕಾರಣ, ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಅಂದಿನ ಪಂದ್ಯದ ಹೀರೋ ಮೊಹಮ್ಮದ್ ಕೈಫ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್ ಗೆದ್ದಷ್ಟೇ ಖುಷಿ ಕೊಡುವ ವಿಚಾರ ಎಂದರೆ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡ 2002ರಲ್ಲಿ ನಾಟ್ವೆಸ್ಟ್ ಸರಣಿ ಗೆದ್ದಿದ್ದು. ಈ ಪಂದ್ಯದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಮೊಹಮ್ಮದ್ ಕೈಫ್ 87 ರನ್ ರನ್ ಸಿಡಿಸಿ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸುವಂತೆ ಮಾಡಿದ್ದರು.
17 ವರ್ಷಗಳ ಬಳಿಕ ದ್ರಾವಿಡ್ ಜೊತೆ ಕ್ರಿಕೆಟ್ ಡೈರೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೈಫ್ ಅಂದು ಭಾರತ ತಂಡ ನಾಟ್ವೆಸ್ಟ್ ಸರಣಿ ಗೆಲ್ಲಲು ದ್ರಾವಿಡ್ ಸರ್ ಕಾರಣ, ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದರಿಂದ ನನಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ದ್ರಾವಿಡ್ ಕೀಪಿಂಗ್ ಜವಾಬ್ದಾರಿ ಒಪ್ಪಿಕೊಳ್ಳದಿದ್ದರೆ ನನ್ನ ಜಾಗದಲ್ಲಿ ಯಾರಾದರೂ ಆಲ್ರೌಂಡರ್ ಆಡಬೇಕಿತ್ತು. ನಾಟ್ವೆಸ್ಟ್ನಂತಹ ಸರಣಿಯಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ನಾನು ದ್ರಾವಿಡ್ ಹಾಗೂ ಗಂಗೂಲಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿ ದ್ರಾವಿಡ್ಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
2002 ರಲ್ಲಿ 326 ರನ್ಗಳ ಬೃಹತ್ ಮೊತ್ತ ಬೆನ್ನೆತ್ತಿದ್ದ ಗಂಗೂಲಿ ಪಡೆ ಮೊದಲ ವಿಕೆಟ್ಗೆ 106 ರನ್ಗಳಿಸಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ಹಾಗೂ 49 ಎಸೆತಗಳಲ್ಲಿ 45 ರನ್ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ ನಂತರ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಢೀರ್ ಕುಸಿತ ಕಂಡ ಟೀಮ್ಇಂಡಿಯಾ 146 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು ಸೋಲಿನತ್ತ ಮುಖ ಮಾಡಿತ್ತು.
ಆದರೆ 7 ನೇ ವಿಕೆಟ್ ಜೊತೆಯಾದ ಯುವ ಆಟಗಾರರಾದ ಯುವರಾಜ್(69) ಹಾಗೂ (ಕೈಫ್ ಔಟಾಗದೇ 87)121 ರನ್ಗಳ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.