ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನಪ್ರಿಯ ಕ್ರೀಡಾಕೂಟ ಐಪಿಎಲ್ ಆಯೋಜನೆ ಮಾಡುವುದು ಬೇಡ ಎಂದು ಬಿಸಿಸಿಐಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಭಾರತದಲ್ಲಿ ಕೊರೊನಾ ಪ್ರಕರಗಳು ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಕ್ರೀಡಾಕೂಟ ಆಯೋಜನೆ ಮಾಡದಿರುವುದು ಒಳಿತು ಎಂಬ ಸಲಹೆಯನ್ನ ಕೇಂದ್ರ ನೀಡಿದೆ. ಇದೇ 29 ರಿಂದ ದೇಶದ ಹಾಗೂ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕಾತರದ ಟೂರ್ನಿಗೆ ಈಗ ಕೊರೊನಾ ಕರಿನೆರಳು ಕವಿದಿದೆ.
ಈ ಬಗ್ಗೆ ಬಿಸಿಸಿಐಗೆ ಸಲಹೆ ನೀಡಿರುವ ಕೇಂದ್ರ ಇದು ಸಲಹೆಯಷ್ಟೇ ಆಗಿದ್ದು, ಪಂದ್ಯ ರದ್ದು ಮಾಡಬೇಕೇ ಅಥವಾ ಮುಂದುವರೆಯಬೇಕೆ ಎಂಬುದನ್ನ ಆಯೋಜಕರೇ ನಿರ್ಧರಿಸಬೇಕಾಗಿದೆ ಎಂದಿದೆ. ನಮ್ಮ ಸಲಹೆ ಈ ಬಾರಿ ಟೂರ್ನಿ ಆಯೋಜನೆ ಮಾಡುವುದು ಬೇಡ ಎಂಬುದು ಆಗಿದೆ. ಆದರೆ ಒಂದೊಮ್ಮೆ ಆಯೋಜಿಸುವುದೇ ಆದರೆ, ನಮ್ಮ ಅಭ್ಯಂತರವೇನೂ ಇಲ್ಲ. ಅದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ವಿದೇಶಾಂಗ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ದಮ್ಮು ರವಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳು ಕೊರೊನಾ ವೈರಸ್ ಹಾವಳಿಯನ್ನ ಗಂಭೀರವಾಗಿ ಪರಿಗಣಿಸಿವೆ. ಈ ನಡುವೆ ಇದೇ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಈ ಬಾರಿ ಐಪಿಎಲ್ನ ಆರಂಭಿಕ ಪಂದ್ಯ ನಡೆಯಲಿದೆ.