ನವದೆಹಲಿ: ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಟೆಸ್ಟ್ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತ ತಂಡದ ವಿರುದ್ಧ ಮುಂದಿನ ಸರಣಿಯಲ್ಲಿ ತನ್ನ ಅತ್ಯಂತ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕೆಂದು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಇಸಿಬಿಗೆ ಸಲಹೆ ನೀಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಪೀಟರ್ಸನ್, ಇಂಗ್ಲೆಂಡ್ ತಂಡ ಒಂದು ವೇಳೆ ತನ್ನ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸದಿದ್ದರೆ ಅದು ಬಿಸಿಸಿಐಗೆ, ಇಂಗ್ಲೆಂಡ್ ಅಭಿಮಾನಿಗಳಿಗೆ ಮಾಡಿದ ಅಗೌರವ ಎಂದು ಹೇಳಿದ್ದಾರೆ.
"ಮೊದಲ ಟೆಸ್ಟ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತನ್ನ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿಕೊಂಡಿದೆಯೇ ಎಂಬುದು ದೊಡ್ಡ ಚರ್ಚೆಯಾಗಿದೆ. ಏಕೆಂದರೆ ಭಾರತದಲ್ಲಿ ಸರಣಿ ಗೆಲ್ಲುವುದು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಷ್ಟೇ ಸಮನಾಗಿರುತ್ತದೆ. ಹಾಗಾಗಿ ನೀವು ಬಲಿಷ್ಠ ತಂಡದೊಂದಿಗೆ ಆಡದಿದ್ದರೆ ಅದು ಇಂಗ್ಲೆಂಡ್ ಅಭಿಮಾನಿಗಳಿಗೆ ಹಾಗೂ ಬಿಸಿಸಿಐಗೆ ಅಗೌರವ ತೋರಿದಂತೆ. ಮೊದಲ ಟೆಸ್ಟ್ನಲ್ಲಿ ಬೈರ್ಸ್ಟೋವ್ ಆಡಬೇಕಿದೆ, ಆ್ಯಂಡರ್ಸನ್ ಅಥವಾ ಬ್ರಾಡ್ ಆಡಬೇಕಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.