ಹೈದರಾಬಾದ್:ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ತನ್ನ ಅತ್ಯುತ್ತಮ 11 ಆಟಗಾರರ ತಂಡವನ್ನು ಮೈದಾನಕ್ಕೆ ಇಳಿಸದಿದ್ದರೆ ಆತಿಥೇಯ ತಂಡಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಆಟಗಾರರ ನಿರ್ವಹಣಾ ನೀತಿಯ ಭಾಗವಾಗಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಬೈರ್‌ಸ್ಟೋವ್‌ಗೆ ವಿಶ್ರಾಂತಿ ನೀಡಿದೆ. ಬೈರ್‌ಸ್ಟೋವ್ ಮಾತ್ರವಲ್ಲದೇ ಆಲ್‌ರೌಂಡರ್ ಸ್ಯಾಮ್ ಕರ್ರನ್ ಮತ್ತು ವೇಗಿ ಮಾರ್ಕ್ ವುಡ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಈ ವರ್ಷ ಇಂಗ್ಲೆಂಡ್ ತಂಡ 17 ಟೆಸ್ಟ್ ಮತ್ತು ಟಿ-20 ವಿಶ್ವಕಪ್ ಸರಣಿ ಆಡಬೇಕಿದ್ದು, ಆಟಗಾರರಿಗೆ ಕೊಂಚ ವಿಶ್ರಾಂತಿ ನೀಡಲು ಬಯಸಿದೆ.
ಭಾರತ ತಂಡದ ವಿರುದ್ಧದ ಗೆಲುವು ನಮ್ಮ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಷ್ಟೇ ಪ್ರಮುಖವಾದದ್ದು, ಹೀಗಾಗಿ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಇಬ್ಬರನ್ನೂ ಆಡಿಸುವಂತೆ ಆಯ್ಕೆದಾರರನ್ನು ಪೀಟರ್ಸನ್ ಒತ್ತಾಯಿಸಿದ್ದಾರೆ.
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಉತ್ತಮ ತಂಡವನ್ನು ಆಯ್ಕೆ ಮಾಡಿದೆಯೇ ಎಂದು ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಸರಣಿ ಗೆಲ್ಲುವುದು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಷ್ಟೇ ಸಮನಾಗಿರುತ್ತದೆ. ಉತ್ತಮ ತಂಡವನ್ನು ಕಣಕ್ಕಿಳಿಸದಿದ್ದರೆ ಇಂಗ್ಲೆಂಡ್ ಅಭಿಮಾನಿಗಳು ಮತ್ತು ಭಾರತ ತಂಡಕ್ಕೆ ಅಗೌರವ ಸೂಚಿಸಿದಂತಾಗುತ್ತದೆ. ಬೈರ್‌ಸ್ಟೋವ್ ಸ್ಟುವರ್ಟ್ ಬ್ರಾಡ್ ಆ್ಯಂಡರ್ಸನ್ ಆಡಬೇಕಾಗಿದೆ "ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.
ಭಾರತದ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ 16 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ವಿಶ್ರಾಂತಿ ಪಡೆದಿದ್ದ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಹಾಗೂ ಪಿತೃತ್ವ ರಜೆ ಪಡೆದಿದ್ದ ರೋನಿ ಬರ್ನ್ಸ್ ತಂಡಕ್ಕೆ ಮರಳಿದ್ದಾರೆ.
16 ಸದಸ್ಯರ ಇಂಗ್ಲೆಂಡ್ ತಂಡ
ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್.