ಚೆನ್ನೈ: ಪ್ರಸ್ತುತ ಭಾರತ - ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಟಿ-20 ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿರುವ ದಿನೇಶ್ ಕಾರ್ತಿಕ್ 2020ರ ವಿಶ್ವಕಪ್ ವೇಳೆಗೆ ತಂಡಕ್ಕೆ ಸೇರಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"2020ಕ್ಕೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ನಲ್ಲಿ ನಡೆಯಲಿದ್ದು, ನಾನು ಫಿನಿಶರ್ ರೋಲ್ ನಿರ್ವಹಿಸಲು ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ತಂಡ ಉತ್ತಮ ಮೊತ್ತ ದಾಖಲಿಸುವಂತೆ ಮಾಡಲು ನಾನು ಸಿದ್ದನಿದ್ದೇನೆ" ಎಂದು ದಿನೇಶ್ ಕಾರ್ತಿಕ್ ಆತ್ಮವಿಶಾಸದಿಂದ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾರ್ತಿಕ್ ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ದೃತಿಗೆಡದೆ ಇತ್ತೀಚೆಗೆ ಮುಗಿದ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ಅವರು ತಂಡದ ನಾಯಕನಾಗಿ ಹಾಗೂ ಮಧ್ಯಮ ಕ್ರಮಾಂದ ಬ್ಯಾಟ್ಸ್ಮನ್ ಆಗಿ 418 ರನ್ಗಳಿಸಿದ್ದಲ್ಲೆ ತಮ್ಮ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು.
ಇದಲ್ಲದೇ ನಾಳೆಯಿಂದ ಆರಂಭವಾಗಲಿರುವ ಸಯ್ಯದ್ ಮುಸ್ತಾಕ್ ಅಲಿ ಟಿ-20 ಟೂರ್ನಿಗೂ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಮೊದಲ ಟೂರ್ನಿಮೆಂಟ್ನಲ್ಲಿ ಚಾಂಪಿಯನ್ ಆಗಿದ್ದು, ಬಿಟ್ಟರೆ ಕಳೆದ 10 ಸೀಸನ್ಗಳಲ್ಲಿ ಫೈನಲ್ ತಲುಪಲೂ ಸಾಧ್ಯವಾಗಿಲ್ಲ. "ನಮ್ಮ ತಂಡ ಟಿ-20 ಫಾರ್ಮೆಟ್ನಲ್ಲಿ ಉತ್ತಮವಾಗಿಲ್ಲ. ಜೊತೆಗೆ ಪ್ರಸ್ತುತ ನಮ್ಮ ತಂಡ ಈ ಟೂರ್ನಿಯಲ್ಲಿ ಬಲಿಷ್ಠವಾಗಿ ಸ್ಪರ್ಧೆಗಿಳಿಯುತ್ತಿಲ್ಲ. ಆದರೆ, ಈ ಬಾರಿ ಕೆಲವು ಉತ್ತಮ ಟಿ-20 ಆಟಗಾರರು ತಂಡದಲ್ಲಿದ್ದು, ಉತ್ತಮ ಪ್ರದರ್ಶನ ತೋರಲು ಬಯಸಿದ್ದೇವೆ" ಎಂದು ಕಾರ್ತಿಕ್ ತಿಳಿಸಿದ್ದಾರೆ.