ಹೈದರಾಬಾದ್:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣವಾಗಿ ವಿಫಲಗೊಂಡಿದೆ. ಹೀಗಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಚಾನ್ಸ್ ಇದ್ದರೂ ಅದನ್ನ ಕೈಚೆಲ್ಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ.
ಮೂರು ಬಾರಿಯ ಚಾಂಪಿಯನ್ ಸಿಎಸ್ಕೆ ತಂಡ ಇಲ್ಲಿಯವರೆಗೆ ಆಡಿರುವ ಆರು ಪಂದ್ಯಗಳಿಂದ ಕೇವಲ ಎರಡಲ್ಲಿ ಗೆಲುವು ದಾಖಲು ಮಾಡಿದ್ದು, ಹೀನಾಯ ಪ್ರದರ್ಶನ ನೀಡಿದೆ. ಕೋಲ್ಕತ್ತಾ ವಿರುದ್ಧ ಗೆಲ್ಲುವ ಅವಕಾಶವಿದ್ದರೂ ಪಂದ್ಯ ಕೈಚೆಲ್ಲಿದ ಬಳಿಕ ಸಿಎಸ್ಕೆ ವಿರುದ್ಧ ಮತ್ತಷ್ಟು ಟೀಕೆ ಎದುರಾಗಿದ್ದು, ಇದೇ ವಿಷಯಕ್ಕೆ ತಂಡವು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೊಳಗಾಗುತ್ತಿದೆ.
ಮಗಳಿಗೆ ಅತ್ಯಾಚಾರದ ಬೆದರಿಕೆ:
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿದ್ದಕ್ಕಾಗಿ ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಜೊತೆಗೆ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.
ಮಹೇಂದ್ರ ಸಿಂಗ್ ಧೋನಿ ಹಾಗೂ ಪತ್ನಿ ಸಾಕ್ಷಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಕಾಮೆಂಟ್ ವಿಭಾಗದಲ್ಲಿ ಈ ರೀತಿಯ ಬೆದರಿಕೆ ಕಂಡು ಬಂದಿವೆ. ನಟಿ ಹಾಗೂ ರಾಜಕಾರಣಿ ನಗ್ಮಾ ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ರಾಷ್ಟ್ರ ಎಲ್ಲಿಗೆ ಹೋಗುತ್ತಿದೆ? ಇದು ಅಸಹ್ಯಕರವಾಗಿದೆ. ಧೋನಿ 5 ವರ್ಷದ ಮಗಳಿಗೆ ಈ ರೀತಿಯ ಬೆದರಿಕೆ ಕರೆ? ಮೋದಿಯವರೇ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಕೂಡ ಇದು ಕೇವಲ ಅಸಹ್ಯ. ನಮ್ಮ ದೇಶಕ್ಕೆ ಏನಾಗುತ್ತಿದೆ? ನಾವು ಎತ್ತ ಸಾಗುತ್ತಿದ್ದೇವೆ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.