ಹೈದರಾಬಾದ್:ಎಂಎಸ್ ಧೋನಿ ಪ್ರಸ್ತುತ ಹೆಚ್ಚು ಸಮಯವನ್ನು ಟೆರಿಟೋರಿಯಲ್ ಆರ್ಮಿಯಲ್ಲಿ ಕಳೆಯಬಹುದು ಎಂದು ಅವರ ಮ್ಯಾನೇಜರ್ ಹಾಗೂ ನೆಚ್ಚಿನ ಸ್ನೇಹಿತ ಅರುಣ್ ಪಾಂಡೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರ ನಿವೃತ್ತಿಯಿಂದ ಬ್ರ್ಯಾಂಡ್ ಮೌಲ್ಯ ಕುಸಿಯಲಿದೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ನಂತರ ಧೋನಿ ನಿವೃತ್ತಿಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಅದು ಮುಂದೂಡಿದ್ದರಿಂದ ಧೋನಿ ಯಾವಾಗ ನಿವೃತ್ತಿಯಾಗಲಿದ್ದಾರೆ ಎಂಬುದು ಗೊತ್ತಿರಲಿಲ್ಲ. ಕೊನೆಯದಾಗಿ ಸ್ವಾತಂತ್ರ್ಯ ದಿನದಂದು ಕ್ರಿಕೆಟ್ ಜೀವನಕ್ಕೆ ತೆರೆ ಎಳೆಯಬೇಕೆಂಬುದು ಅವರ ಸ್ವತಂತ್ರ ನಿರ್ಧಾರ ಎಂದು ತಿಳಿಸಿದ್ದಾರೆ.
"ಧೋನಿ ಶೀಘ್ರದಲ್ಲಿ ನಿವೃತ್ತಿಯಾಗಲಿದ್ದಾರೆ ಎಂಬುದು ಗೊತ್ತಿತ್ತು. ಆದರೆ, ನಿಖರವಾದ ದಿನಾಂಕ ತಿಳಿದಿರಲಿಲ್ಲ. ಅದನ್ನು ಅವರೇ ನಿರ್ಧರಿಸಿಬೇಕಿತ್ತು. ಅವರು ಐಪಿಎಲ್ಗೆ ಸಿದ್ಧತೆ ಆರಂಭಿಸಿದ್ದಾರೆ. ಟಿ-20 ವಿಶ್ವಕಪ್ ಮುಂದೂಡಿದ್ದರಿಂದ ಅವರು ಮಾನಸಿಕವಾಗಿ ಮುಕ್ತರಾದರು. ಆಗಸ್ಟ್ 15 ಸೇನೆಗೆ ಮಹತ್ವದ ದಿನ ಹಾಗಾಗಿ ಧೋನಿ ಆ ದಿನವೇ ನಿವೃತ್ತಿ ತೆಗೆದುಕೊಂಡಿರಬಹುದು" ಎಂದು ಪಾಂಡೆ ಹೇಳಿದ್ದಾರೆ.
ಎಂಎಸ್ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಗೌರವ ಹುದ್ದೆಯನ್ನು ಹೊಂದಿದ್ದಾರೆ. 2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಒಂದು ತಿಂಗಳ ಕಾಲ ಪ್ಯಾರಾಚೂಟ್ ರಿಜಿಮೆಂಟ್ನಲ್ಲಿ ತರಬೇತಿ ಪಡೆದಿದ್ದರು.
"ಒಂದು ವಿಚಾರ ಮಾತ್ರ ಖಚಿತಪಡಿಸುವ ಧೋನಿ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ. ತಮ್ಮ ವಾಣಿಜ್ಯೋಧ್ಯಮ ಹಾಗೂ ಮತ್ತಿತರ ಬದ್ಧತೆಗಳಿಗೆ ಸಮಯ ನೀಡಲಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದೇವೆ" ಎಂದು ಅವರು ಮಾಹಿತಿ ನೀಡಿದರು.
ನಿವೃತ್ತಿಯಾದ ನಂತರ ಆಥ್ಲೀಟ್ಗಳ ಬ್ರಾಂಡ್ ಮೌಲ್ಯ ಕಡಿಮೆಯಾಗಿತ್ತದೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು ಅದು ಧೋನಿ ವಿಚಾರದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ. 2019ರ ವಿಶ್ವಕಪ್(ಜುಲೈನಿಂದ)ನಂತರ ನಾವು 10 ಹೊಸ ಬ್ರಾಂಡ್ ಗಳೊಂದಿಗೆ ಸಹಿ ಮಾಡಿದ್ದೇವೆ. ಅವುಗಳು ಧೀರ್ಘಕಾಲದವುಗಳಾಗಿವೆ. ಧೋನಿ ಕೇವಲ ಕ್ರಿಕೆಟಿಗ ಮಾತ್ರವಲ್ಲ, ಯೂತ್ ಐಕಾನ್ ಆಗಿ ಅವರ ಮೌಲ್ಯ ಮುಂದುವರೆಯಲಿದೆ ಎಂದು ಅರುಣ್ ಪಾಂಡೆ ಹೇಳಿದ್ದಾರೆ.
ನಿವೃತ್ತಿ ನಂತರ ಕೆಲವು ಅಥ್ಲೀಟ್ಗಳ ಮೌಲ್ಯ ಕುಸಿಯಬಹುದು. ಆದರೆ, ಅದು ಧೋನಿ ವಿಚಾರದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ. ಏಕೆಂದರೆ ಅವರ ಸಾಧನೆ ವೈಯಕ್ತಿಕವಲ್ಲ, ಅವರು ತಂಡಕ್ಕಾಗಿ ಹಾಗೂ ದೇಶಕ್ಕಾಗಿ ಆಡಿದ್ದಾರೆ ಎಂದಿರುವ ಅವರು ಮುಂದಿನ ಎರಡು ಅಥವಾ ಮೂರು ಐಪಿಎಲ್ ಆವೃತ್ತಿಗಳಲ್ಲಿ ಧೋನಿ ಆಡಲಿದ್ದಾರೆ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ.