ಚೆನ್ನೈ: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಎಂಬುದು ಕೊಲೆಗಿಂತ ದೊಡ್ಡ ಅಪರಾಧ ಎಂದು ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷ್ಯಾಚಿತ್ರವೊಂದರಲ್ಲಿ ಮಾತನಾಡಿರುವ ಮಾಹಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ದೊಡ್ಡ ಅಪರಾಧ ನಾನು ಮಾಡಬಹುದಾದರೆ ಅದು ಕೊಲೆ ಅಲ್ಲ, ಬದಲಾಗಿ ಮ್ಯಾಚ್ ಫಿಕ್ಸಿಂಗ್ ಎಂದಿದ್ದಾರೆ.
ಧೋನಿ ಅವರು ಚೆನ್ನೈ ಸೂಪರ್ಕಿಂಗ್ಸ್ನಲ್ಲಿರುವಾಗಲೇ ಮ್ಯಾಚ್ ಫಿಕ್ಸಿಂಗ್ ಆದ ಆರೋಪ ಕೇಳಿಬಂದಿತ್ತು. ಇದರಿಂದಾಗಿ ತಂಡವನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು.
'ಮ್ಯಾಚ್ ಫಿಕ್ಸಿಂಗ್ ಆರೋಪ ನನ್ನ ಬದುಕಿನಲ್ಲಿ ಅನುಭವಿಸಿದ ಕರಾಳ ನೆನಪು. ತಂಡಕ್ಕೆ ಅದು ಸಹಿಸಲಸಾಧ್ಯವಾದ ನೋವು ತಂದಿತ್ತು. ನಾನೂ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದೆ. ವಾಪಸ್ ತಂಡಕ್ಕೆ ಮರಳಿರುವುದು ಒಂದು ಭಾವುಕ ಕ್ಷಣವನ್ನು ಹುಟ್ಟುಹಾಕಿದೆ, ಎಂದು ಧೋನಿ 45 ಸೆಕೆಂಡ್ಗಳ ಸಾಕ್ಷ್ಯಾಚಿತ್ರದ ಟ್ರೇಲರ್ನಲ್ಲಿ ಹೇಳಿದ್ದಾರೆ. ಈ ಸಾಕ್ಷ್ಯಾಚಿತ್ರವು ಮೇ 20ರಂದು ಬಿಡುಗಡೆಯಾಗಲಿದೆ.