ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ನ ಇಷ್ಟು ವರ್ಷದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರ ಬಂದಿರುವುದರಿಂದ ಎಂ.ಎಸ್.ಧೋನಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಒಳ್ಳೆಯ ಅವಕಾಶ ದೊರೆತಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಾಗೂ ಐಪಿಎಲ್ನಲ್ಲಿ ತಮ್ಮ ಬಹುಪಾಲು ಪಂದ್ಯಗಳಲ್ಲಿ ಕೆಳ ಕ್ರಮಾಂತದಲ್ಲೇ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ರೈನಾ ಈ ಬಾರಿ ಟೂರ್ನಿಗೆ ಅಲಭ್ಯರಾಗುತ್ತಿರುವುದರಿಂದ ಧೋನಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆಯಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಗಂಭೀರ್, ಧೋನಿಗೆ ಮೂರನೇ ಕ್ರಮಾಂದಲ್ಲಿ ಬ್ಯಾಡಿಂಗ್ ಮಾಡುವುದಕ್ಕೆ ಇದೊಂದು ಉತ್ತಮ ಅವಕಾಶ. ಅವರು ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಹಾಗಾಗಿ ಮೇಲಿನ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಎಸೆತಗಳು ದೊರೆಯಲಿವೆ. ಜೊತೆಗೆ ಇಷ್ಟು ವರ್ಷಗಳ ಕಾಲ ಭಾರತ ತಂಡಕ್ಕೆ ಆಸರೆಯಾಗಿದ್ದ ಮಾದರಿಯಲ್ಲಿಯೇ ಅವರು ಸಿಎಸ್ಕೆ ತಂಡಕ್ಕೂ ನೆರವಾಗಬಹುದು ಎಂದಿದ್ದಾರೆ.
" ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಕೇದಾರ್ ಜಾಧವ್, ಡ್ವೇನ್ ಬ್ರಾವೋ ಮತ್ತು ಸ್ಯಾಮ್ ಕರ್ರನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಅವರು ಕೂಡ ಬ್ಯಾಟಿಂಗ್ ಮಾಡಲು ಸಮರ್ಥರಾಗಿದ್ದಾರೆ. ಆದ್ದರಿಂದ ಧೋನಿಯಂತಹ ಆಟಗಾರನಿಗೆ 3ನೇ ಕ್ರಮಾಂಕ ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ಮತ್ತು ಅದನ್ನು ಧೋನಿ ಕೂಡ ಆನಂದಿಸಲಿದ್ದಾರೆ ಎಂದುಕೊಂಡಿದ್ದೇನೆ ಎಂದು ಗೌತಿ ವಿವರಿಸಿದ್ದಾರೆ.
ಸುರೇಶ್ ರೈನಾ ತಂಡದಲ್ಲಿ ಇಲ್ಲ. ಹಾಗಾಗಿ ಅವರಷ್ಟೇ ಅನುಭವವುಳ್ಳ ಆಟಗಾರ ಆ ಸ್ಥಾನಕ್ಕೆ ಅಗತ್ಯ. ನನ್ನ ಪ್ರಕಾರ ಅದು ಧೋನಿ ಆಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಗಂಭೀರ್ ಹೇಳಿದ್ದಾರೆ.