ಮುಂಬೈ:ಭಾರತ ತಂಡದ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ಎಂಎಸ್ ಧೋನಿಯ ಫೇವರೇಟ್ ಪ್ಲೇಯರ್ ಆಗಿದ್ದರು ಎನ್ನುವ ಯುವರಾಜ್ ಸಿಂಗ್ ಕಮೆಂಟ್ಗೆ ಉತ್ತರಿಸಿರುವ ರೈನಾ ನನ್ನಲ್ಲಿನ ಟ್ಯಾಲೆಂಟ್ ಇತ್ತು, ಅದಕ್ಕೆ ಧೋನಿ ನನ್ನನ್ನು ಬೆಂಬಲಿಸುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.
ಎಂಎಸ್ಡಿ ಭಾರತ ತಂಡದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡು ತಂಡದ ನಾಯಕನಾಗಿದ್ದರು. ರೈನಾ ಕೂಡ ಎರಡು ತಂಡದಲ್ಲೂ ಧೋನಿ ನಾಯಕತ್ವದಲ್ಲಿ ಆಡಿದ್ದರು, ಈ ವೇಳೆ ತಮನ್ನು ಬೆಂಬಲಿಸಿದ್ದಕ್ಕೆ ರೈನಾ ಧನ್ಯವಾದ ಅರ್ಪಿಸಿದ್ದಾರೆ.
ಇತ್ತೀಚೆಗೆ ಯುವರಾಜ್ ಸಿಂಗ್ ಸಂದರ್ಶನವೊಂದರಲ್ಲಿ ರೈನಾ ಎಂಎಸ್ ಧೋನಿಯ ನೆಚ್ಚಿನ ಆಟಗಾರರಾಗಿದ್ದರು. 2011ರ ವಿಶ್ವಕಪ್ನಲ್ಲಿ ಮಾತ್ರ ರೈನಾರಿಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದರು. ಅವರು ಫಾರ್ಮ್ನಲ್ಲಿದ್ದ ಯೂಸುಫ್ ಪಠಾಣ್ ರನ್ನು ಕಡೆಗಣಿಸಿ ಫಾರ್ಮ್ನಲ್ಲಿಲ್ಲದ ರೈನಾರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ನಾನು ಆಲ್ರೌಂಡರ್ ಆಗಿದ್ದರಿಂದ ನನ್ನನ್ನು ಆಯ್ಕೆ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು ಎಂದು ಯುವಿ ಹೇಳಿಕೆ ನೀಡಿದ್ದಾರೆ.
"ಎಂಎಸ್ ನನ್ನನ್ನು ಬೆಂಬಲಿಸುತ್ತಿದ್ದದ್ದು ನಿಜ, ಅದಕ್ಕೆ ಕಾರಣ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿತ್ತು. ಅವರು ನನಗೆ ಬೆಂಬಲ ನೀಡಿದಾಗಲೆಲ್ಲಾ ನಾನು ಸಿಎಸ್ಕೆ ಹಾಗೂ ಭಾರತ ತಂಡದಲ್ಲಿ ಪ್ರದರ್ಶನದ ಮೂಲಕ ನನ್ನ ಸಾಮರ್ಥ್ಯ ಸಾಭೀತು ಪಡಿಸುತ್ತಿದ್ದೆ" ಎಂದು ಪವರ್ ಹಿಟ್ಟರ್ ರೈನಾ, ಯುವಿ ಕಾಮೆಂಟ್ಗೆ ತಿರುಗೇಟು ನೀಡಿದ್ದಾರೆ.
ಅಲ್ಲದೆ ನಾನು ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೇ, ರನ್ ಗಳಿಸದಿದ್ದರೆ, ನನ್ನ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವುದಾಗಿ ಧೋನಿ ಹೇಳುತ್ತಿದ್ದರು. ಆದರೆ ನಾನು ನನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೆ ಎಂದು ರೈನಾ ತಿಳಿಸಿದ್ದಾರೆ.
ನಾನು ಧೋನಿಗೆ ಕೃತಜ್ಞತೆ ಅರ್ಪಿಸಲು ಬಯಸುತ್ತೇನೆ, ಏಕೆಂದರೆ ಅವರು ಸದಾ ನನ್ನ ಶ್ರೇಯಸ್ಸನ್ನು ಬಯಸುತ್ತಿದ್ದರು. ನನ್ನಲ್ಲಿ ಪ್ರತಿಭೆ ಇದೆ ಎಂದು ಅವರಿಗೆ ಯಾವಾಗಲು ತಿಳಿದಿತ್ತು. ಭಾರತ ತಂಡ ಸೌರವ್ ಗಂಗೂಲಿ ನಂತರ ಸಿಕ್ಕ ಶ್ರೇಷ್ಠ ನಾಯಕ ಎಂದು ಧೋನಿಯನ್ನು ಹೊಗಳಿದ್ದಾರೆ.
ರೈನಾ ಧೋನಿ ನಾಯಕತ್ವದಲ್ಲಿ 153 ಏಕದಿನ ಪಂದ್ಯಗಳನ್ನಾಡಿದ್ದು, 4362 ರನ್ಗಳಿಸಿದ್ದಾರೆ. 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬ್ಯಾಟಿಂಗ್ ನಡೆಸಿ ಸೆಮಿಫೈನಲ್ ಗೇರಲು ನೆರವಾಗಿದ್ದರು.