ಮುಂಬೈ:ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ತಮಗೆ ಸ್ಫೂರ್ತಿಯಾಗಿರುವ ಎಂ.ಎಸ್.ಧೋನಿ ತಂಡವನ್ನೇ ಮಣಿಸಿ, ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ನೇತೃತ್ವದ ಮೊದಲ ಗೆಲುವನ್ನು ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಅರ್ಪಿಸಿದ್ದಾರೆ.
"ಟಾಸ್ಗಾಗಿ ಧೋನಿ ಜೊತೆಯಾಗಿ ನಡೆಯುವುದು ತುಂಬಾ ವಿಶೇಷವಾದದ್ದು. ಯಾವುದೇ ಸಂದರ್ಭದಲ್ಲಿ ಅವರ ಮಾರ್ಗದರ್ಶನಕ್ಕಾಗಿ ಎದುರು ನೋಡುವ ಮೊದಲ ವ್ಯಕ್ತಿ ನಾನು. ಅವರಿಂದ ನಾನು ಸಾಕಷ್ಟನ್ನು ಕಲಿತಿದ್ದೇನೆ" ಎಂದು ಪ್ರಶಸ್ತಿ ಸಮಾರಂಭದಲ್ಲಿ ರಿಷಭ್ ಪಂತ್ ಹೇಳಿದ್ದಾರೆ.
ಡೆಲ್ಲಿ ತಂಡದ ಕಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿರುವುದರಿಂದ 23 ವರ್ಷದ ಯುವ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಜವಾಬ್ದಾರಿಯನ್ನು ನೀಡಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ ನೀಡಿದ 189 ರನ್ಗಳ ಗುರಿಯನ್ನು ಪೃಥ್ವಿ ಶಾ(72) ಮತ್ತು ಅನುಭವಿ ಧವನ್(84) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಇನ್ನೂ 8 ಎಸೆತ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಪಂತ್ ಶುಭಾರಂಭ ಮಾಡಿದರು.