ಮುಂಬೈ: ಭಾರತ ಕ್ರಿಕೆಟ್ ಇತಿಹಾಸ ಕಂಡ ಅತ್ಯುತ್ತಮ ಕೋಚ್ಗಳಲ್ಲಿ ಒಬ್ಬರಾಗಿದ್ದ ಗ್ಯಾರಿ ಕರ್ಸ್ಟನ್ ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಗ್ಯಾರಿ ಕೇವಲ ಉತ್ತಮ ಆಟಗಾರರಷ್ಟೇ ಆಗಿರಲಿಲ್ಲ, ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ಮನುಷ್ಯರಾಗಿದ್ದರು ಎಂದು ಹೇಳಿದ್ದಾರೆ.
ನಾನು ಭೇಟಿಯಾಗಿರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಧೋನಿ ಒಬ್ಬರು. ಅವರೊಬ್ಬ ಜನರ ಶ್ರೇಷ್ಠ ನಾಯಕ. ತಂಡದ ನಾಯಕನಾಗಿ ನಂಬಲಾಗದ ಸಾಧನೆಯನ್ನು ಧೋನಿ ಮಾಡಿದ್ದಾರೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರೊಬ್ಬ ನಿಷ್ಠಾವಂತ ವ್ಯಕ್ತಿ ಎಂದು ಕರ್ಸ್ಟನ್, ಧೋನಿ ಬಗ್ಗೆ ಯೂಟ್ಯೂಬ್‌ನ ಆರ್ಕೆ ಶೋನಲ್ಲಿ ಹೇಳಿದ್ದಾರೆ.
ಧೋನಿಯ ನಿಷ್ಠೆಯನ್ನು ವಿವರಿಸುವುದಕ್ಕಾಗಿ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ಟರ್ಸ್ ಹಿಂದಿನ ಒಂದು ಘಟನೆಯನ್ನು ಮೆಲುಕು ಹಾಕಿದ್ದಾರೆ.
ಆ ಘಟನೆಯನ್ನು ನಾನೆಂದಿಗೂ ಮರೆಯುವುದಿಲ್ಲ. ವಿಶ್ವಕಪ್ (2011)ಗೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಫ್ಲೈಟ್ ಸ್ಕೂಲ್ಗೆ ಭೇಟಿ ನೀಡಲು ತಂಡಕ್ಕೆ ಆಹ್ವಾನ ಬಂದಿತ್ತು. ಅದರಂತೆ, ಒಂದು ದಿನ ಬೆಳಗ್ಗೆ ನಾವೆಲ್ಲಾ ಅಲ್ಲಿಗೆ ಹೊರಟಿದ್ದೆವು. ನಾನು ಸೇರಿದಂತೆ ಪ್ಯಾಡಿ ಅಪ್ಟನ್ ಹಾಗೂ ಎರಿಕ್ ಸಿಮನ್ಸ್ ಮೂವರು ವಿದೇಶಿಯರಿದ್ದೆವು. ಆದರೆ ಆ ಫ್ಲೈಟ್ ಸ್ಕೂಲ್ ಕೆಲವು ಭದ್ರತಾ ಕಾರಣಗಳಿಂದ ವಿದೇಶಿ ಪ್ರಜೆಗಳಿಗೆ ಒಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ತಿಳಿಯಿತು.
ಆಗ ಧೋನಿ, ಅವರು ನಮ್ಮ ಜನರು. ಅವರಿಗೆ ಪ್ರವೇಶಕ್ಕೆ ಅನುಮತಿಯಿಲ್ಲವೆಂದರೆ ನಮ್ಮಲ್ಲಿ ಯಾರೂ ಅಲ್ಲಿಗೆ ಹೋಗುವುದಿಲ್ಲ ಎಂದು ಕಾರ್ಯಕ್ರಮವನ್ನೇ ರದ್ದುಪಡಿಸಿದ್ದರು ಎಂದು ಕರ್ಸ್ಟನ್ ತಿಳಿಸಿದ್ದಾರೆ.