ಬೆಂಗಳೂರು: 2019 ರರ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಿರುವ ಕರ್ನಾಟಕ ತಂಡ ಗೋವಾ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಕರ್ನಾಟಕ ಬೌಲರ್ಗಳು ಗೋವಾ ತಂಡವನ್ನು ಕೇವಲ 47.5 ಓವರ್ಗಳಿಗೆ ಆಲೌಟ್ ಮಾಡಿದರು.
ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಗೋವಾ ತಂಡದ ಬ್ಯಾಟ್ಸ್ಮನ್ಗಳು ಆದಿತ್ಯ ಕೌಶಿಕ್ ಬಿಟ್ಟು ಉಳಿದೆಲ್ಲ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ನೆಲೆಯೂರಲಾಗಲಿಲ್ಲ. ಕೌಶಿಕ್ ಮಾತ್ರ 86 ಎಸೆತಗಳಲ್ಲಿ ತಲಾ 4 ಬೌಂಡರಿ - ಸಿಕ್ಸರ್ ನೆರವಿನಿಂದ 75 ರನ್ಗಳಿಸಿದರು. ಇವರನ್ನು ದರ್ಶನ್ ಮಿಸಲ್ ಮಾತ್ರ 33 ರನ್ಗಳಿಸಿ ಸಾಥ್ ನೀಡಿದರು.
ಕರ್ನಾಟಕ ಪರ ಪ್ರವೀಣ್ ದುಬೆ 3 ವಿಕೆಟ್, ಮಿಥುನ್, ಸುಚಿತ್ ತಲಾ 2 ವಿಕೆಟ್ ಹಾಗೂ ಕೆ ಗೌತಮ್, ಕರುಣ್ ನಾಯರ್ ತಲಾ ಒಂದು ವಿಕೆಟ್ ಪಡೆದು ಗೋವಾ ತಂಡವನ್ನು 200 ರೊಳಗೆ ಕಟ್ಟಿಹಾಕಿದರು.
ಇನ್ನು 172 ರನ್ಗಳ ಗುರಿ ಪಡೆದ ಮನೀಷ್ ಪಡೆ ಆರಂಭದಲ್ಲಿ ಕೆ.ಎಲ್. ರಾಹುಲ್(9) ವಿಕೆಟ್ ಕಳೆದುಕೊಂಡಿತು, ನಂತರ ಬಂದ ಕರುಣ್ ನಾಯರ್ ಕೂಡ (21) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ತಮ್ಮ ಸ್ಥಿರತೆ ಆಟ ಮುಂದುವರಿಸಿದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 116 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ 102 ರನ್ಗಳಿಸಿದರು.
ಅಲ್ಲದೆ ನಾಯಕ ಮನೀಷ್ ಪಾಂಡೆ ಜೊತೆಗೆ ಮುರಿಯ ಮೂರನೆ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಮನೀಷ್ 34 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 34 ರನ್ಗಳಿಸಿದರು.
ಒಟ್ಟಾರೆ ಟೂರ್ನಿಯಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ 6 ಗೆಲುವು ಹಾಗೂ ಒಂದು ಸೋಲು ಕಂಡಿದ್ದು 24 ಅಂಕಗೊಳಡನೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.