ನವದೆಹಲಿ:ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೊಂಜೆ ಅವರನ್ನು ಒಳಗೊಂಡ ಕ್ರಿಕೆಟ್‌ನ ಅತಿದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣಗಳ ಬುಕ್ಕಿ ಮತ್ತು ಪ್ರಮುಖ ಆರೋಪಿ ಸಂಜೀವ್ ಚಾವ್ಲಾ ಅವರನ್ನು ದೆಹಲಿ ನ್ಯಾಯಾಲಯ 12 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
2000ರ ಫೆಬ್ರವರಿ-ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ, ಭಾರತದ ಪ್ರವಾಸ ಕೈಗೊಂಡಿದ್ದ ವೇಳೆ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿಯ ಫಲಿತಾಂಶ ಮೊದಲೇ ನಿರ್ಧಾರವಾಗಿತ್ತು ಎಂದು ತಿಳಿದು ಬಂದಿತ್ತು. ಹೀಗಾಗಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವರು ಭಾರತಕ್ಕೆ ಬೇಕಾಗಿದ್ದು, ಮ್ಯಾಚ್ ಫಿಕ್ಸಿಂಗ್ ನಡೆಸಿರುವ ಕಾರಣ ಅದರ ಮಾಹಿತಿ ಪಡೆದುಕೊಳ್ಳಲು ಭಾರತಕ್ಕೆ ಗಡಿಪಾರು ಮಾಡುವಂತೆ ಅಧಿಕಾರಿಗಳು ಕೇಳಿಕೊಂಡಿದ್ದರು. ಅದರಂತೆ ಲಂಡನ್ನಿಂದ ಗಡಿಪಾರಾಗಿದ್ದ ಚಾವ್ಲಾ ಅವರನ್ನ ಭಾರತಕ್ಕೆ ಕರೆತರಲಾಗಿತ್ತು.
ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ದೆಹಲಿ ಪೊಲೀಸರು ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಕೋರಿದ್ದರು. ಆದರೆ, ನ್ಯಾಯಾಧೀಶ ಸುಧೀರ್ ಕುಮಾರ್ ಸಿರೋಹಿ ಅವರು ಚಾವ್ಲಾ ಅವರನ್ನು 12 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದರು.
ಮ್ಯಾಚ್ ಫಿಕ್ಸಿಂಗ್ನಲ್ಲಿ ಅನೇಕ ಭಾರತೀಯ ಪ್ಲೇಯರ್ಸ್ ಕೂಡ ಭಾಗಿಯಾಗಿರುವ ಆರೋಪ ಕೇಳಿ ಬಂದಿರುವ ಕಾರಣ, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಸಂಜೀವ್ ಚಾವ್ಲಾ ಮೊಬೈಲ್ನಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಮೊಬೈಲ್ ನಂಬರ್ ಇದ್ದು, ಕೆಲ ಇಂಡಿಯನ್ ಪ್ಲೇಯರ್ಸ್ ನಂಬರ್ ಕೂಡ ಅದರಲ್ಲಿದೆ ಎಂದು ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್ ತಿಳಿಸಿತ್ತು.
ಇನ್ನು ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಹ್ಯಾನ್ಸಿ ಕ್ರೊಂಜೆ 2002ರಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು.